ಆರ್‌ಎಸ್‌ಎಸ್‌ನವರು ಯಾವತ್ತಾದರೂ ಸಗಣಿ ಎತ್ತಿದ್ದಾರಾ: ಸಿದ್ದರಾಮಯ್ಯ ಪ್ರಶ್ನೆ

Public TV
3 Min Read
RSS Siddu

– ಬಿಜೆಪಿಗೂ ಹಿಟ್ಲರ್‌ಗೂ ಯಾವ ವ್ಯತ್ಯಾಸ ಇಲ್ಲ

ಮೈಸೂರು:  ಸಗಣಿ ಎತ್ತದವರು ಗೋ ರಕ್ಷಣೆ ಹೆಸರಿನಲ್ಲಿ ಗುಂಪು ಹತ್ಯೆ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಗುಂಪು ಹತ್ಯೆ ಹೆಚ್ಚಾಗಿವೆ. ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನವರು ಯಾವತ್ತಾದರೂ ಸಗಣಿ ಎತ್ತಿದ್ದಾರಾ? ಹಸು ಸಾಕಿದ್ದಾರಾ? ಕೇವಲ ಭಾಷಣ ಮಾಡುತ್ತಾರೆ ಅಷ್ಟೇ. ನಾವು ಗೋವು ಪೂಜೆ ಮಾಡುತ್ತೇವೆ ಎಂದು ಹೇಳಿದರು.

mohan bhagavat 4

ಬಿಜೆಪಿಗೂ ಹಿಟ್ಲರ್‌ಗೂ ಯಾವ ವ್ಯತ್ಯಾಸವೂ ಇಲ್ಲ. ಒಂದು ಸುಳ್ಳುನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯ ಮಾಡಿದರು. ನಾವು ಆ ಸುಳ್ಳನ್ನು ಹಿಮ್ಮೆಟ್ಟಿಸಿ ಸತ್ಯ ಹೇಳಲಿಲ್ಲ. ಹೀಗಾಗಿ ನಾವು ಚುನಾವಣೆಯಲ್ಲಿ ಸೋಲಬೇಕಾಯಿತು. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತೆ. ಆದರೆ ನಮ್ಮ ಕಾರ್ಯಕರ್ತರು ನೀವು ಗೆಲ್ಲುತ್ತಿರಾ ಅಂತ ಸುಳ್ಳು ಹೇಳಿದರು. ಕೇವಲ ದುಡ್ಡಿನಿಂದ ಚುನಾವಣೆ ನಡೆಯುವುದಿಲ್ಲ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಏನೂ ಹಣದಿಂದ ಚುನಾವಣೆ ಗೆದ್ರಾ? ಜನರನ್ನು ಹೇಗೆ ಪರಿವರ್ತನೆ ಮಾಡುತ್ತೇವೆ ಎನ್ನುವುದರ ಮೇಲೆ ಫಲಿತಾಂಶ ನಿಂತಿರುತ್ತದೆ ಎಂದು ಹೇಳಿದರು.

ಹಿಂದುತ್ವ ಎಂಬ ಕಾಯಿನ್ ಮಾಡಿದ್ದೇ ವೀರ್ ಸಾವರ್ಕರ್. ಸಾವರ್ಕರ್ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು. ಮಹಾತ್ಮ ಗಾಂಧೀಜಿ ಅವರ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಆರೋಪಿ. ಅದಕ್ಕೆ ಭಾರತ ರತ್ನ ಬೇಡ ಎಂದು ಹೇಳಿದ್ದೇನೆ. ಸಾವರ್ಕರ್ ಜೈಲಿಗೆ ಹೋಗಿರಬಹುದು, ಆದರೆ ಹತ್ಯೆ ಪ್ರಕರಣದ ಆರೋಪಿ ತಾನೇ ಎಂದು ಪ್ರಶ್ನಿಸಿದರು.

siddu

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗ ರಾಜಕೀಯ ಪ್ರಬುದ್ಧತೆ ಇಲ್ಲ. ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎನ್ನುವುದೇ ಅವರಿಗೆ ಗೊತ್ತಿಲ್ಲ. ಚಿಕ್ಕ ಮಗುವಿನಂತೆ ಮಾತನಾಡುತ್ತಾರೆ. ಆರ್‍ಎಸ್‍ಎಸ್ ಕಾರ್ಯಕರ್ತ ಎನ್ನುವ ಕಾರಣಕ್ಕಷ್ಟೇ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಕುಟುಕಿದರು.

ದ್ವೇಷದ ರಾಜಕಾರಣ ಮಾಡಲ್ಲ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಆದರೆ ಆಡಳಿತ ಶುರು ಮಾಡಿದ್ದೇ ದ್ವೇಷದ ರಾಜಕಾರಣದಿಂದ. ದೇಶದ ಎಲ್ಲಾ ಕಡೆ ಕಾಂಗ್ರೆಸ್‍ನವರನ್ನು ತನಿಖಾ ಸಂಸ್ಥೆ ಹೆಸರಿನಲ್ಲಿ ಬಿಜೆಪಿ ಹೆದರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

BSY KATEEL

ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ ಪಾಲಿಗೆ ಬೇಡವಾದ ಮಗು. ಬಿಜೆಪಿಯಲ್ಲಿ ದೊಡ್ಡ ಭಿನ್ನಾಭಿಪ್ರಾಯ ಇದೆ. ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೂ ಸಿಎಂಗೂ ಆಗಲ್ಲ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೂ ಬಿಎಸ್‍ವೈಗೂ ಹೊಂದಾಣಿಕೆ ಇಲ್ಲ. ಇದನ್ನೆಲ್ಲ ನೋಡಿದ್ರೆ ಸಿಎಂ ಯಡಿಯೂರಪ್ಪ ಅವರ ಬಗ್ಗೆ ಅಯ್ಯೋ ಎನ್ನಿಸುತ್ತದೆ. ಸಿಎಂ ಕಚೇರಿ ನೌಕಕರ ನೇಮಕದಲ್ಲೂ ಯಡಿಯೂರಪ್ಪಗೆ ಸ್ವತಂತ್ರ ಇಲ್ಲ ಎಂದು ಕಿಚಾಯಿಸಿದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ 370ರದ್ದು ಮಾಡಿದ್ದೇವೆ ಅಂತ ಬಿಜೆಪಿಯವರು ಹೇಳುತ್ತಾರೆ. ಅದನ್ನು ಬಿಟ್ಟು ಬೇರೆ ಏನು ಮಾಡಿದ್ದಾರೆ. ಹೊಟ್ಟೆಗೆ ಅನ್ನ ಕೊಟ್ಟಿದ್ದಾರಾ? ಕೈಗಳಿಗೆ ಕೆಲಸ ಕೊಟ್ಟಿದ್ದಾರಾ? ಯುವಕರಿಗೆಲ್ಲಾ ಬಿಜೆಪಿ ತಲೆ ಕೆಡಿಸಿದೆ. ಮಾತು ಎತ್ತಿದರೆ ಮೋದಿ, ಮೋದಿ ಅಂತಾರೆ. ಯಾಕೆ ಮೋದಿ ಅಂತಾನೂ ಅವರಿಗೆ ಗೊತ್ತಿಲ್ಲ. ಸುಮ್ನೆ ಮೋದಿ ಅಂತಾವೇ. ಪ್ರಧಾನಿ ನರೇಂದ್ರ ಮೋದಿ ಮಹಾನ್ ದೇಶ ಭಕ್ತರೇ? ಮೋದಿ ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಅವರು ಹೇಗೆ ಸ್ವಾತಂತ್ರ ಹೋರಾಟ ಮಾಡಿದರು. ಅಮೆರಿಕದ ಅಧ್ಯಕ್ಷ ಟ್ರಂಪ್ ಮೋದಿ ಅವರನ್ನು ರಾಷ್ಟ್ರಪಿತ ಅಂತಾ ಹೇಳುತ್ತಾರೆ. ದೇಶದ ಬಗ್ಗೆ ಪ್ರೀತಿ ಇದ್ದಿದ್ದರೆ ಅದೇ ಸ್ಥಳದಲ್ಲಿ ಟ್ರಂಪ್ ಅವರಿಗೆ ಮೋದಿ, ನಾನು ರಾಷ್ಟ್ರಪಿತ ಆಗುವುದಕ್ಕೆ ಸಾಧ್ಯವಿಲ್ಲ ಅಂತ ಹೇಳಬೇಕಿತ್ತು ಎಂದು ಗುಡುಗಿದರು.

Share This Article
Leave a Comment

Leave a Reply

Your email address will not be published. Required fields are marked *