ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆ ಜಾರಿಗೆ ಬಿಗಿಪಟ್ಟು ಹಿಡಿದು ರೈತರು ನಡೆಸುತ್ತಿರುವ ಹೋರಾಟ ಭಾರೀ ಮಳೆಯ ನಡುವೆಯೂ ಮುಂದುವರಿದಿದ್ದು, ರಾಜ್ಯಪಾಲರು ಭೇಟಿ ನೀಡುವವರೆಗೂ ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಹೋರಾಟಗಾರರು ಬೀಗಿ ಪಟ್ಟು ಹಿಡಿದಿದ್ದಾರೆ.
ಇಂದು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸುವ ರೈತರ ಯತ್ನ ವಿಫಲವಾಗಿತ್ತು ಈ ಹಿನ್ನೆಲೆಯಲ್ಲಿ ನೂರಾರು ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಆದರೆ ರೈತರು ಹೋರಾಟ ನಡೆಸುತ್ತಿದ್ದರು ಕೂಡ ಯಾವೊಬ್ಬ ಸಚಿವರು ಕೂಡ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾಡಲಿಲ್ಲ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾದಾಯಿ ಹೋರಾಟ ನೇತೃತ್ವ ವಹಿಸಿರುವ ರೈತ ಮುಖಂಡ ವೀರೇಶ್ ಸೊಬರದ ಮಠ ಅವರು, ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಎಡಿಜಿಪಿ ಅವರನ್ನು ನಾವು ಭೇಟಿ ಮಾಡಿದ್ದೆವು. ಅವರ ಎದುರು ರಾಜ್ಯಪಾಲರ ಭೇಟಿ ಅವಕಾಶ ಕುರಿತು ಮಾತನಾಡಿದ್ದೇವೆ. ಭೇಟಿ ಸಾಧ್ಯವಾಗುತ್ತಾ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಒತ್ತಾಯ ಮಾಡಿದ್ದೇವೆ. ರಾಜ್ಯಪಾಲರು ರಾಜ್ಯಕ್ಕೆ ಪ್ರಥಮ ಪ್ರಜೆ, ನಾವು ಕೂಡ ಈ ರಾಜ್ಯದ ಹಕ್ಕುದಾರರು. ಆದ್ದರಿಂದ ರಾಜ್ಯಪಾಲರಿಂದಲೇ ನಮಗೆ ಸ್ಪಷ್ಟನೆ ಬರಬೇಕು, ಅಲ್ಲಿಯವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.