ಫಸ್ಟ್ ಲುಕ್‍ನಲ್ಲಿ ಲಕಲಕಿಸಿದ ಸಕಲಕಲಾವಲ್ಲಭ!

Public TV
2 Min Read
Sakala Kala Vallabha 3 1

ಬೆಂಗಳೂರು: ಸತ್ಯಘಟನೆಯಾಧಾರಿತ ಚಿತ್ರಗಳ ಮೂಲಕವೇ ನಿರ್ದೇಶಕರಾಗಿ ಖ್ಯಾತಿ ಪಡೆದಿರುವವರು ಜೇಕಬ್ ವರ್ಗೀಸ್. ಈವರೆಗೂ ಪೃಥ್ವಿ, ಚಂಬಲ್‍ನಂಥಾ ಸತ್ಯ ಘಟನೆಯಾಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದವರು ಜೇಕಬ್ ವರ್ಗೀಸ್. ಸವಾರಿಯಂಥಾ ಭಿನ್ನ ಬಗೆಯ ಚಿತ್ರವನ್ನೂ ಸೃಷ್ಟಿಸಿದ್ದ ಜೇಕಬ್ ಒಂದು ಸಿನಿಮಾ ಮಾಡುತ್ತಾರೆಂದರೆ ಇತಿಹಾಸದ ಹುದುಲಲ್ಲಿ ಮುಚ್ಚಿ ಹೋದ ಸತ್ಯವೊಂದು ಬೆಳಕು ಕಾಣಲಿದೆ ಅಂತಲೇ ಅರ್ಥ. ಆದರೆ ಈ ಬಾರಿ ಅವರು ಇಂಥಾ ಗಂಭೀರ ಕಥಾ ವಸ್ತುಗಳ ಹಾದಿಯಿಂದ ಸಂಪೂರ್ಣ ಕಾಮಿಡಿಯತ್ತ ಹೊರಳಿಕೊಂಡಿದ್ದಾರೆ. ಅದರ ಫಲವೆಂಬಂತೆ ‘ಸಕಲ ಕಲಾ ವಲ್ಲಭ’ ಚಿತ್ರ ಜೀವ ಪಡೆದಿದೆ.

RISHI A

ಸಕಲ ಕಲಾ ವಲ್ಲಭ ಚಿತ್ರದಲ್ಲಿ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಟೈಟಲ್ಲಿನತ್ತಲೇ ಪ್ರಧಾನವಾಗಿ ಫೋಕಸ್ ಮಾಡಿರೋ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಷ್ಟಕ್ಕೂ ಜೇಕಬ್ ವರ್ಗೀಸ್ ಚಂಬಲ್ ಗೆಲುವಿನ ನಂತರದಲ್ಲಿ ಈ ಸಿನಿಮಾ ಘೋಷಣೆ ಮಾಡಿದ ಕ್ಷಣದಿಂದಲೇ ಪ್ರೇಕ್ಷಕರು ಅದರತ್ತ ಕಣ್ಣು ನೆಟ್ಟಿದ್ದರು. ಇದ್ಯಾವ ಸತ್ಯ ಘಟನೆ ಬಗೆಯುವ ಪ್ರಯತ್ನ ಎಂಬಂಥಾ ಬೆರಗಿನ ಭಾವವೂ ಬಹುತೇಕರಲ್ಲಿ ಸುಳಿದಾಡಿತ್ತು. ಆದರೆ ಜೇಕಬ್ ವರ್ಗೀಸ್ ಕಡೆಯಿಂದ ತೂರಿ ಬಂದದ್ದು ಅಚ್ಚರಿದಾಯಕ ಸುದ್ದಿ.

ಯಾಕೆಂದರೆ, ಈ ಬಾರಿ ಅವರು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡೋದನ್ನೇ ಉದ್ದೇಶವಾಗಿಸಿಕೊಂಡು ಅಖಾಡಕ್ಕಿಳಿದಿದ್ದಾರೆ. ಸಕಲಕಲಾ ವಲ್ಲಭ ಭರಪೂರ ಕಾಮಿಡಿ ಸಬ್ಜೆಕ್ಟ್ ಹೊಂದಿರೋ ಚಿತ್ರ. ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರ ಗೆಲ್ಲುತ್ತಲೇ ಜೇಕಬ್ ಸಕಲಕಲಾವಲ್ಲಭ ಕಥೆಗೆ ಕಾವು ಕೊಡಲಾರಂಭಿಸಿದ್ದರಂತೆ. ಅದರ ನಾಯಕನ ಪಾತ್ರಕ್ಕೆ ಯಾವ ನಟ ಜೀವತುಂಬ ಬಲ್ಲ ಅಂತ ಹುಡುಕಾಟದಲ್ಲಿದ್ದ ಅವರಿಗೆ ಕಂಡಿದ್ದು ರಿಷಿ. ಈತ ಯಾವ ಥರದ ಪಾತ್ರಗಳಿಗಾದರೂ ಒಗ್ಗಿಕೊಂಡು ನಟಸಬಲ್ಲ ಪ್ರತಿಭಾವಂತ ನಟನಾದ ಕಾರಣದಿಂದಲೇ ಸಕಲ ಕಲಾ ವಲ್ಲಭನಾಗೋ ಅವಕಾಶ ಗಿಟ್ಟಿಸಿಕೊಂಡಿದ್ದಾರಂತೆ.

Sakala Kala Vallabha 1

ಇನ್ನುಳಿದಂತೆ ರೆಬಾ ಮೋನಿಕಾ ರಿಷಿಗೆ ಸಾಥಿಯಾಗಿದ್ದಾರೆ. ಅಚ್ಯುತ್ ಕುಮಾರ್, ಸಾಯಿಕುಮಾರ್ ಮುಂತಾದ ಘಟಾನುಘಟಿ ತಾರೆಯರ ದಂಡೇ ಈ ತಾರಾಗಣದಲ್ಲಿದೆ. ಒಂದು ಸಣ್ಣ ಪಾತ್ರ ಸುಮ್ಮನೆ ಹಾದು ಹೋದರೂ ಅದು ನೋಡುಗರ ಮನದಲ್ಲಿ ಅಚ್ಚೊತ್ತುವಂತೆ ಕಟ್ಟಿ ಕೊಡೋದು ಜೇಕಬ್ ವರ್ಗೀಸ್ ಅವರ ಪ್ರಸಿದ್ಧ ಶೈಲಿ. ಈ ಬಾರಿ ಅವರು ಕಾಮಿಡಿ ಜಾನರಿಗೆ ಶಿಫ್ಟ್ ಆಗಿದ್ದರೂ ಕೂಡಾ ದೃಶ್ಯ ಕಟ್ಟುವ ಕಲಾವಂತಿಕೆಯನ್ನು ಈ ಹಿಂದಿನಂತೆಯೇ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಸಕಲ ಕಲಾ ವಲ್ಲಭನ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನವೆಂಬರ್ ಕಡೇ ಘಳಿಗೆಯಲ್ಲಿ ಸಕ ಕಲಾ ವಲ್ಲಭನ ದರ್ಶನ ಭಾಗ್ಯ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *