ಮಂಗಳೂರು: ದೇವಸ್ಥಾನದಲ್ಲಿ ಮೋಜು-ಮಸ್ತಿ ವಿರೋಧಿಸಿದ್ದ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದಲ್ಲಿ ನಡೆದಿದೆ.
ಮಂಗಳೂರು ನಿವಾಸಿ ಸಂತೋಷ್ ಹಲ್ಲೆಗೊಳಗಾದ ಯುವಕ. ಹಲ್ಲೆಯ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಂತೋಷ್‍ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಗರದ ಹೊರ ವಲಯದ ದೇವಸ್ಥಾನವೊಂದರಲ್ಲಿ ಬುಧವಾರ ನಾಲ್ವರು ಮದ್ಯ ಸೇವಿಸಿ ಮೋಜು-ಮಸ್ತಿ ನಡೆಸಿದ್ದರು. ಇದನ್ನು ನೋಡಿದ್ದ ಸಂತೋಷ್ ಅವರಿಗೆ ಹಿಗ್ಗಾಮುಗ್ಗಾ ಬೈದು ಕಳುಹಿಸಿದ್ದ. ಇದರಿಂದ ಕೋಪಗೊಂಡಿದ್ದ ದುಷ್ಕರ್ಮಿಗಳು ಸಂತೋಷ್ ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು.
ಸಂತೋಷ್ ಬೈಕ್‍ನಲ್ಲಿ ಮಂಗಳೂರಿನಿಂದ ಮನೆಗೆ ತೆರಳುತ್ತಿದ್ದ. ಈ ವೇಳೆ ಮಂಗಳೂರು ಹೊರವಲಯದ ನೀರುಮಾರ್ಗ ಬಳಿಯ ಪಡು ಎಂಬಲ್ಲಿ ಸಂತೋಷ್‍ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ಮಾಡಿದ್ದಾರೆ. ಘಟನೆಯಿಂದಾಗಿ ಗಾಯಗೊಂಡ ಸಂತೋಷ್ ಸ್ಥಳದಲ್ಲಿಯೇ ಬಿದ್ದು ಒದ್ದಾಡುತ್ತಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿ, ಸಂತೋಷ್‍ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಈ ಸಂಬಂಧ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.