ನನಗೂ ದರ್ಶನ್‍ಗೂ ಮನಸ್ತಾಪವಾಗಿ ಕೆಲಸ ಬಿಟ್ಟಿರುವುದು ನಿಜ – ಶ್ರೀನಿವಾಸ್

Public TV
2 Min Read
20265096 1432672823517600 2867360689684653595 n e1571233947216

ಬೆಂಗಳೂರು: ನನಗೂ ನಟ ದರ್ಶನ್ ತೂಗುದೀಪ ಅವರಿಗೂ ಕೆಲಸದ ವಿಷಯದಲ್ಲಿ ಮನಸ್ತಾಪವಿರುವುದು ನಿಜ, ಹೀಗಾಗಿ ಕೆಲಸ ಬಿಟ್ಟಿದ್ದೇನೆ ಎಂದು ನಟ ದರ್ಶನ್ ಮ್ಯಾನೇಜರ್ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀನಿವಾಸ್, ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ನಟ ದರ್ಶನ್ ತೂಗುದೀಪರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ಸೆಪ್ಟೆಂಬರ್ 18 ರಿಂದ ದರ್ಶನ್ ಬಳಿ ಕೆಲಸ ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಕೆಲಸ ಬಿಟ್ಟಿದ್ದರಿಂದ ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ, ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ. ಹೀಗಾಗಿ ಯಾರೂ ಈ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಡಿ ಕಂಪನಿ ಹೇಳಿದ್ದೇನು?
ನಟ ದರ್ಶನ್ ತೂಗುದೀಪ್ ಬಳಗದಿಂದ ಮತ್ತೊಬ್ಬ ವ್ಯಕ್ತಿ ಹೊರ ಬಿದ್ದಿರುವ ಕುರಿತು ಡಿ ಕಂಪನಿ ಫೇಸ್‍ಬುಕ್ ಮತ್ತು ಟ್ವಿಟ್ಟರ್‍ನಲ್ಲಿ ತಿಳಿಸಿದೆ. ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ) ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿಬಾಸ್ ರವರ ಹೆಸರಲ್ಲಿ ಯಾವುದೇ ವ್ಯವಹಾರ ಮಾಡದಿರಿ ಎಂದು ಡಿ ಕಂಪನಿ ಹೇಳಿದೆ.

ಇನ್ನು ಮುಂದೆ ದರ್ಶನ್ ಮತ್ತು ತೂಗುದೀಪ ಕಂಪನಿ ವ್ಯವಹಾರಗಳಿಗೂ ಶ್ರೀನಿವಾಸ್‍ಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ಕಾರಣಕ್ಕೂ ದರ್ಶನ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಶ್ರೀನಿವಾಸ್ ಅವರನ್ನು ಸಂಪರ್ಕಿಸಬಾರದು ಎಂದು ಪೇಜ್‍ನಲ್ಲಿ ತಿಳಿಸಲಾಗಿದೆ.

ಇದಕ್ಕೆ ಅಭಿಮಾನಿಗಳು ಯಾವ ಕಾರಣಕ್ಕೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದ ಕಮೆಂಟ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಿವಾಸ್ ಒಂದು ಹೋಟೆಲ್ ಆರಂಭಿಸಿದ್ದರು. ಅಷ್ಟು ಬಿಟ್ಟರೆ ಯಾವ ಕಾರಣಕ್ಕೆ ಶ್ರೀನಿವಾಸ್ ವಿರುದ್ಧ ಈ ನಿರ್ಧಾರ ಕೈಗೊಳ್ಳಲಾಗಿದೆ ತಿಳಿದು ಬಂದಿಲ್ಲ. ಕಳೆದ ವರ್ಷ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಕೂಡ ಹಣಕಾಸು ವ್ಯವಹಾರದ ವಿಚಾರವಾಗಿ ದಚ್ಚು ಕ್ಯಾಂಪ್‍ನಿಂದ ಹೊರ ಬಿದ್ದಿದ್ದರು.

darshan 5

ಈ ಕುರಿತು ಕೇವಲ ಡಿ ಕಂಪನಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ತಿಳಿಸಿದೆ. ನಟ ದರ್ಶನ್ ತೂಗುದೀಪ್ ಆಗಲಿ ಅಥವಾ ಅವರ ಸಹೋದರ ದಿನಕರ್ ತೂಗುದೀಪ್ ಆಗಲಿ ಈ ಕುರಿತು ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *