ಮರೆತ ನೆನಪಿನ ಘಮವ ಮತ್ತೆ ನೆನಪಿಸೋ ಗಂಟುಮೂಟೆ!

Public TV
1 Min Read
Roopa Rao Gantumoote Main 2

ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ಗಂಟುಮೂಟೆ’ ಚಿತ್ರ ಇದೇ ವಾರ ಅಂದರೆ ಹದಿನೆಂಟನೇ ತಾರೀಕಿನಂದು ಬಿಡುಗಡೆಗೊಳ್ಳುತ್ತಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ ಎಂಬ ಕೊರಗನ್ನು ನೀಗುವಂತೆ ಹೊಸತನದ ಕಥೆಯೊಂದರ ಜೊತೆ ರೂಪಾ ರಾವ್ ಅಡಿಯಿರಿಸಿದ್ದಾರೆ. ಅವರ ಪಾಲಿಗಿದು ಮೊದಲ ಚಿತ್ರ. ಬಹುತೇಕ ಹೊಸಬರನ್ನೇ ಜೊತೆಗಿಟ್ಟುಕೊಂಡು ಆಗಮಿಸಿರೋ ರೂಪಾ ರಾವ್ ಮುಂದೀಗ ಸಕಾರಾತ್ಮಕ ವಾತಾವರಣವೇ ಮೂಡಿಕೊಂಡಿದೆ.

Roopa Rao Gantumoote Main 4

ಅಷ್ಟಕ್ಕೂ ಈ ಚಿತ್ರ ಕನ್ನಡದಲ್ಲಿ ಸದ್ದು ಮಾಡೋದಕ್ಕಿಂತ ಮೊದಲೇ ವಿಶ್ವ ಮಟ್ಟದಲ್ಲಿ ಕನ್ನಡದ ಘನತೆಯನ್ನು ಎತ್ತಿ ಹಿಡಿದಿತ್ತು. ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‍ಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಮಾತ್ರವಲ್ಲದೇ ಪ್ರಶಸ್ತಿಯನ್ನೂ ಬಾಚಿಕೊಂಡಿತ್ತು. ಇಂಥಾ ಗಂಟುಮೂಟೆ ಕನ್ನಡ ಪ್ರೇಕ್ಷಕರೆದುರು ಬಿಚ್ಚಿಕೊಂಡಿದ್ದು ಟ್ರೇಲರ್ ಮೂಲಕ. ಇದರಲ್ಲಿ ಕಂಡ ನೆನಪುಗಳ ಛಾಯೆ, ಕನಸುಗಳ ಮಾಯೆ, ಅದಾಗ ತಾನೇ ಹದಿಹರೆಯವನ್ನು ಬೆರಗುಗಣ್ಣಿಂದ ದಿಟ್ಟಿಸುವ ಮನಸುಗಳನ್ನಾಳುವ ಭ್ರಮೆ ಮತ್ತು ಎಲ್ಲರ ಮನಸಿಗೂ ಪುಟ್ಟ ಮಗುವೊಂದು ಮನಸಿಗೆ ಕಿರುಬೆರಳು ಸೋಕಿಸಿ ಖಿಲ್ಲನೆ ನಕ್ಕಂಥಾ ಆಹ್ಲಾದಗಳು ಸೋಕಿದ್ದವು. ಒಂದು ಟ್ರೇಲರ್ ಯಶಸ್ವಿಯಾಗೋದಕ್ಕೆ, ಆ ಚಿತ್ರ ಭರವಸೆ ಹುಟ್ಟಿಸುವುದಕ್ಕೆ ಇದಕ್ಕಿಂತ ಬೇರೇನು ಬೇಕು?

Roopa Rao Gantumoote Main 1

ಗಂಟುಮೂಟೆ ಎಂಬುದು ತೊಂಭತ್ತರ ದಶಕದಲ್ಲಿ ಸಂಭವಿಸೋ ಹೈಸ್ಕೂಲು ಪ್ರೇಮ ಕಥೆಯನ್ನಾಧರಿಸಿದ ಚಿತ್ರ. ಇಂಥಾ ಯಾವುದೇ ಕಥೆಗಳಾದರೂ ಹುಡುಗನ ಕಣ್ಣೋಟದಿಂದಲೇ ಬಿಚ್ಚಿಕೊಳ್ಳುತ್ತದೆ. ಆದರಿಲ್ಲಿ ಆ ಹೊತ್ತಿನ ಪ್ರೇಮದ ಪುಳಕ, ಭಾವನೆಗಳ ತಾಕಲಾಟಗಳೆಲ್ಲವೂ ಹುಡುಗಿಯ ದಿಕ್ಕಿನಿಂದ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಇಲ್ಲಿರೋದು ಮಾಮೂಲು ಹೈಸ್ಕೂಲು ಕಥೆಯಲ್ಲ. ಚಿತ್ರತಂಡ ಹೇಳಿಕೊಳ್ಳುತ್ತಿರೋ ಪ್ರಕಾರ ನೋಡ ಹೋದರೆ ಖಂಡಿತಾ ಇದು ಸಿದ್ಧಸೂತ್ರಗಳಿಗಂಟಿದ ಚಿತ್ರವಲ್ಲ. ನಿಜಕ್ಕೂ ಗಂಟುಮೂಟೆಯೊಳಗೆ ಎಂತೆಂಥಾ ಅಂಶಗಳಿವೆ ಅನ್ನೋದು ಈ ವಾರವೇ ಗೊತ್ತಾಗಲಿದೆ.

https://www.facebook.com/publictv/videos/742395332886864/?v=742395332886864

Share This Article
Leave a Comment

Leave a Reply

Your email address will not be published. Required fields are marked *