ಕನಕಪುರದ ಬಂಡೆಗೆ ತ್ರಿಬಲ್ ಟೆನ್ಶನ್- ಇಂದೂ ಬೇಲ್ ಸಿಗೋದು ಡೌಟ್?

Public TV
3 Min Read
DK Shivakumar

– ಡಿಕೆಶಿ ತಾಯಿಗೆ ಇಡಿ ಡ್ರಿಲ್

ನವದೆಹಲಿ: ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಇಂದು ಒಂದಲ್ಲ ಎರಡಲ್ಲ ತ್ರಿಬಲ್ ಟೆನ್ಶನ್. ಒಂದೆಡೆ ಜಾಮೀನು ಸಿಗದೆ ಒದ್ದಾಡುತ್ತಿರುವ ಕನಕಪುರದ ಬಂಡೆ ಸಲ್ಲಿಸಿದ್ದ ಅರ್ಜಿ ಇಂದು ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಇದರ ಜೊತೆಗೆ ನ್ಯಾಯಾಂಗ ಬಂಧನ ಅವಧಿಯೂ ವಿಸ್ತರಣೆ ಆಗಲಿದೆ. ಇದೆರಡು ಸಾಲದು ಎಂದು ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆಯೂ ಇಂದೇ ನಡೆಯಲಿದೆ.

ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ನ್ಯಾಯಾಂಗ ಬಂಧನದಡಿ ಜೈಲು ಸೇರಿರುವ ಡಿ.ಕೆ ಶಿವಕುಮಾರ್ ಜಾಮೀನುಗಾಗಿ ಬಲಿಷ್ಠ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಡಿ ವಿಶೇಷ ಕೋರ್ಟಿನಲ್ಲಿ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಆ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಮಧ್ಯಾಹ್ನ 3.30ಕ್ಕೆ ವಿಚಾರಣೆ ನಡೆಸಲಿದೆ. ಸೋಮವಾರ ಬೆಳಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಡಿಕೆಶಿ ಪರ ವಕೀಲರ ಗೈರು ಹಿನ್ನೆಲೆಯಲ್ಲಿ ಇಂದಿಗೆ ವಿಚಾರಣೆ ಮುಂದೂಡಿದ್ರು. ಈ ನಡುವೆ ಇಡಿ ಅಧಿಕಾರಿಗಳು ಹೆಚ್ಚುವರಿ ತನಿಖಾ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇಂದು ವಿಚಾರಣೆ ನಡೆಯಲಿದೆ.

dkshi mother

ಬಹುತೇಕ ಡಿ.ಕೆ ಶಿವಕುಮಾರ್ ಪರ ವಕೀಲರು ವಾದ ಮಂಡಿಸಲಿದ್ದು ಬಳಿಕ ಇಡಿ ವಕೀಲರು ವಾದ ಮಂಡನೆ ಸಮಯ ನಿಗಧಿ ಆಗಲಿದೆ. ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿರುವ ಇಡಿ ಅಧಿಕಾರಿಗಳು ಕೋರ್ಟಿಗೆ ಹೆಚ್ಚುವರಿ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಪ್ರಕರಣ ಸಂಬಂಧ ಸುಮಾರು 51 ಜನಕ್ಕೆ ಸಮನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ವಿಚಾರಣೆ ಅಡ್ಡಿ ಮತ್ತು ಸಾಕ್ಷಿ ನಾಶ ಆಗುವ ಹಿನ್ನೆಲೆ ಜಾಮೀನು ನೀಡಿದಂತೆ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಇಡಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆ.ಎನ್ ನಟರಾಜ್ ವಾದ ಅಮಿತ್ ಮಹಾಜನ್ ವಾದ ಮಂಡಿಸಲು ಸಿದ್ಧವಾಗಿದ್ದಾರೆ.

DK SHIVAKUMAR copy

ಡಿ.ಕೆ ಶಿವಕುಮಾರ್‍ಗೆ ಎರಡನೇ ಬಾರಿ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗುವ ಹಿನ್ನೆಲೆ ಅವರನ್ನ ದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಲಿದ್ದು, ಜಾಮೀನು ಸಿಗದ ಹಿನ್ನೆಲೆ ಅನಿವಾರ್ಯವಾಗಿ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ. ಹೀಗಾಗಿ ಬಹುತೇಕ ಬೆಳಕಿನ ಹಬ್ಬ ದೀಪಾವಳಿಯನ್ನು ಡಿ.ಕೆ ಶಿವಕುಮಾರ್ ಜೈಲಿನಲ್ಲಿ ಕಳೆಯಲಿದ್ದಾರೆ ಎನ್ನಲಾಗಿದೆ.

DK Shivakumar 3

ಈ ಮಧ್ಯೆ ಇಡಿ ಕುಣಿಗೆ ಡಿಕೆಶಿ ಅವರ ಇಡೀ ಕುಟುಂಬಕ್ಕೆ ವಿಸ್ತರಣೆ ಆಗುತ್ತಿದೆ. ಸಹೋದರ ಡಿ.ಕೆ ಸುರೇಶ್, ಪುತ್ರಿ ಐಶ್ವರ್ಯ ಬಳಿಕ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೂ ವಿಚಾರಣೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇಂದು ಗೌರಮ್ಮ ಅವರಿಗೆ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದ್ದು, ಡಿ.ಕೆ ಶಿವಕುಮಾರ್ ಕುಟುಂಬದೊಳಗಿನ ಆರ್ಥಿಕ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.

dk shi tihar

ಐಶ್ವರ್ಯಗೆ ಅಜ್ಜಿ ಗೌರಮ್ಮ ಕೊಟ್ಟಿದ್ದ ಆಸ್ತಿ-ಹಣದ ಬಗ್ಗೆ ವಿಚಾರಣೆ, 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2018 ಜೂನ್‍ನಲ್ಲಿ ಗೌರಮ್ಮ ಅಕೌಂಟ್‍ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂ. ವರ್ಗಾವಣೆ, ಸಿಂಗಲ್ ಟ್ರಾಂಜಾಕ್ಷನ್ ಮೂಲಕ 193 ಕೋಟಿ ಐಶ್ವರ್ಯ ಅಕೌಂಟಿಗೆ ಕ್ರೆಡಿಟ್ ಮಾಡಿರುವುದು. ಹಾಗೆಯೇ ಪುತ್ರ ಡಿಕೆಶಿ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ಹಾಗೂ 15 ಕೋಟಿ ರೂ. ಸಾಲ ಪಡೆದಿರುವುದು, ಇದರ ನಡುವೆ ಡಿಕೆಶಿಗೆ 35 ಲಕ್ಷ ಸಾಲ ನೀಡಿರುವುದು, ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ಗೆ ಗೌರಮ್ಮ 4.89 ಕೋಟಿ ಸಾಲ ಕೊಟ್ಟಿರುವುದು, ಗೌರಮ್ಮರ ಹೆಸರಲ್ಲಿ 273 ಕೋಟಿ ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಬಗ್ಗೆ, ಶಿವಕುಮಾರ್, ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋಟಿ ಸಾಲ ವ್ಯವಹಾರ ನಡೆದಿರುವ ಬಗ್ಗೆ ಇಡಿ ವಿಚಾರಣೆ ನಡೆಸಲಿದೆ.

dkshi mother 1

2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ 4.9 ಗುಂಟೆ ಜಮೀನುನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಅದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿದ್ದು ಇದೆಲ್ಲದರ ಆರ್ಥಿಕ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ತನ್ನ ಕೇಸ್ ಟೆನ್ಶನ್ ಮಾತ್ರವಲ್ಲದೇ ಕುಟುಂಬಸ್ಥರ ವಿಚಾರಣೆ ಕೂಡ ಭೀತಿ ಹುಟ್ಟಿಸಿದೆ. ಇಡಿ ಅಧಿಕಾರಿಗಳ ಮುಂದೆ ಗೌರಮ್ಮ ಏನ್ ಹೇಳ್ತಾರೆ ಇದರಿಂದ ಪ್ರಕರಣ ಹೇಗೆ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕು.

Share This Article
Leave a Comment

Leave a Reply

Your email address will not be published. Required fields are marked *