ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಒಬ್ಬ ವ್ಯಕ್ತಿಯೂ ಅನಿವಾರ್ಯ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅದರದೇ ಆದ ಇತಿಹಾಸವಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ, ವಿಪಕ್ಷನಾಯಕ ಸೇರಿದಂತೆ ಹಲವು ಹುದ್ದೆಗಳನ್ನ ಪಡೆದಿದ್ದಾರೆ. ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ. ಸಾಮೂಹಿಕ ನಾಯಕತ್ವ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯ ಎಂದರು. ಇದೇ ವೇಳೆ ವಿಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಪರ 60ಕ್ಕೂ ಹೆಚ್ಚು ನಾಯಕರು ಸಹಿ ಮಾಡಿ ಹೈಕಮಾಂಡ್‍ಗೆ ನೀಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ಬಗ್ಗೆ ನಾಯಕರ ಮುಂದೇ ಅಭಿಪ್ರಾಯ ಹೇಳಿರುವುದರಿಂದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ಸಮ್ಮತಿ ಇದೆ ಎಂದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದ ಮೇಲೆ ನಾವು ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದ್ದೆವು. ಆದ್ದರಿಂದ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಎಲ್ಲರನ್ನೂ ಸಮನಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಅವರು ಇಲ್ಲಿಗೆ ಬಂದ ಮೇಲೆ ಮೂಲ ಅಥವಾ ವಲಸಿಗ ಎಂಬ ಭಾವನೆ ಮೂಡುವುದು ತಪ್ಪು. ತಾರತಮ್ಯ ನೀತಿಯನ್ನು ಬಿಟ್ಟು ಎಲ್ಲರೂ ಒಟ್ಟಾಗಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ನಿನ್ನೆ ನಡೆದ ಸಭೆಯಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾಮೂಹಿಕ ನಾಯಕತ್ವದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಒಲವು ಹೊಂದಿದೆ. ವಿಪಕ್ಷ ಸ್ಥಾನ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಸಮರ್ಥರಿದ್ದಾರೆ. ಎಲ್ಲಾ ಮಾಹಿತಿಯನ್ನು ಹೈಕಮಾಂಡ್ ಗೆ ನೀಡಿದ್ದೇವೆ. ಹೈಕಮಾಂಡ್ ವಿಪಕ್ಷ ನಾಯಕನನ್ನ ಆಯ್ಕೆ ಮಾಡಲಿದ್ದು, ಈ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.