ದುರ್ಗಾ ಪೂಜೆ ಪೆಂಡಾಲ್‍ನಲ್ಲಿ ಅಜಾನ್ – ಆಕ್ರೋಶಕ್ಕೆ ಕಾರಣವಾದ ಪೂಜಾ ಸಮಿತಿ ನಡೆ

Public TV
3 Min Read
durga puja

ಕೋಲ್ಕತ್ತಾ: ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ಅಜಾನ್ ನುಡಿಸಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನವರಾತ್ರಿಯ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಜಾನ್(ಇಸ್ಲಾಮಿಕ್ ಕರೆ) ನುಡಿಸಿದ್ದಕ್ಕಾಗಿ ಕೋಲ್ಕತ್ತಾದ ಬೆಲಿಯಾಘಾಟಾ 33 ಪಲ್ಲಿ ದುರ್ಗಾ ಪೂಜಾ ಪೆಂಡಾಲ್ ಸಮಿತಿಯ ವಿರುದ್ಧ ದೂರು ದಾಖಲಿಸಲಾಗಿದೆ.

ಸ್ಥಳೀಯ ವಕೀಲ ಸಾಂತನು ಸಿಂಘಾ ಅವರು ದೂರು ಸಲ್ಲಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಶಾಂತಿಗೆ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಬೆಲಿಯಾಘಟ ದುರ್ಗಾ ಪೂಜಾ ಪೆಂಡಲ್‍ನಲ್ಲಿ ಅಜಾನ್ ನುಡಿಸುವ ವಿಡಿಯೋವನ್ನು ವಿಶ್ವ ಹಿಂದೂ ಪರಿಷತ್(ವಿಎಚ್‍ಪಿ) ಸದಸ್ಯರು ನನಗೆ ರವಾನಿಸಿದ್ದಾರೆ ಎಂದು ಸಿಂಘಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಪೂಜಾ ಸಮಿತಿಯು ಈ ಕುರಿತು ಸ್ಪಷ್ಟಪಡಿಸಿದ್ದು, ಜಾತ್ಯಾತೀತತೆಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದೆ.

ಬೆಲಿಯಾಘಾಟಾ 33 ಪ್ಯಾಲಿ ಕ್ಲಬ್‍ನ ಕಾರ್ಯದರ್ಶಿ ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದು, ನಾವು ಒಟ್ಟಿಗೆ ಇದ್ದೇವೆ, ಒಬ್ಬಂಟಿಯಾಗಿಯಲ್ಲ ಹೀಗಾಗಿ ಆಚರಣೆಯ ಸಮಯದಲ್ಲಿ ಅಜಾನ್ ನುಡಿಸಿದ್ದೇವೆ. ಅಜಾನ್ ಮಾತ್ರವಲ್ಲ ನಾವು ಚರ್ಚ್, ದೇವಾಲಯ ಮತ್ತು ಮಸೀದಿಯ ಮಾದರಿಗಳನ್ನೂ ಬಳಸಿದ್ದೇವೆ ಹಾಗೂ ಅವುಗಳ ಚಿಹ್ನೆಯನ್ನೂ ಬಳಸಿದ್ದೇವೆ. ಮಾನವೀಯತೆಯು ಎಲ್ಲ ಧರ್ಮಗಳಿಗಿಂತ ಉನ್ನತವಾದದ್ದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪೂಜಾ ಸಮಿತಿಯ ಅಧ್ಯಕ್ಷರು ಈ ಕುರಿತು ವಿವರಿಸಿ, ನಾವೆಲ್ಲರೂ ಒಂದೇ ಎಂದು ನಾವು ನಂಬಿದ್ದೇವೆ. ಹುಟ್ಟಿದಾಗ ಯಾವುದೇ ಪ್ರತ್ಯೇಕತೆ ಇಲ್ಲ, ರಕ್ತದ ಬಣ್ಣದಲ್ಲಿ ವ್ಯತ್ಯಾಸವಿಲ್ಲ, ಹೀಗಿರುವಾಗ ಏಕೆ ಭೇದ ಭಾವ, ಎಲ್ಲ ಧರ್ಮಗಳು ನಮ್ಮ ಪ್ರಬಲ ದೇಶದ ಭಾಗವಾಗಿವೆ. ಇದು ಕೋಮು ಸೌಹಾರ್ದತೆಯ ಪ್ರತಿಬಿಂಬವಾಗಿದೆ, ನಾವು ಒಗ್ಗಟ್ಟಿನ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಲವರು ‘ಮಂದಿರ್ ಕಟ್ಟುತ್ತೇವೆ’ ಎಂದು ಕೂಗುತ್ತಿದ್ದಾರೆ. ಆದರೆ ಈ ಪೆಂಡಾಲ್‍ಗೆ ಭೇಟಿ ನೀಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ನಾಯಕ ಮುಕುಲ್ ರಾಯ್ ಈ ಕುರಿತು ಪ್ರತಿಕ್ರಿಯಿಸಿ, ಇದು ಒಂದು ಆಚರಣೆ, ನಾವು ನಮ್ಮ ಧರ್ಮವನ್ನು ನಂಬುತ್ತೇವೆ. ನಮ್ಮ ಧರ್ಮಕ್ಕೆ ಹಾನಿ ಮಾಡುವುದನ್ನು ನಾವು ಬಯಸುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೂ ಜಾಗರಣ್ ಮಂಚ್ ದಕ್ಷಿಣ ಬಂಗಾಳದ ಪ್ರಚಾರಕ್ ಪ್ರಮುಖ್ ವಿವೇಕ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಮಸೀದಿಗಳಲ್ಲಿ ಅಥವಾ ಈದ್ ಸಮಯದಲ್ಲಿ ದುರ್ಗಾ ಸಪ್ತಸ್ತ್ರುತಿ ಪಾಥ್ ಅಥವಾ ಚಂಡಿ ಪಾಥ್ ಹಾಡುವುದನ್ನು ಕೇಳಿದ್ದೀರಾ, ಕ್ರಿಸ್‍ಮಸ್ ಸಮಯದಲ್ಲಿ ಚರ್ಚ್ ನಲ್ಲಿ ಹನುಮಾನ್ ಚಾಲೀಸಾ ಹಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ, ಜಾತ್ಯಾತೀತತೆಯ ಜವಾಬ್ದಾರಿ ಕೇವಲ ಹಿಂದೂಗಳ ಮೇಲೆ ಮಾತ್ರವಿದೆಯೇ ಎಂದು ಪ್ರಶ್ನಿಸಿದ್ದಾರೆ.

BeliaghataPandal

ಸಂಘಟನೆಯ ವಿರುದ್ಧ ಈಗಾಗಲೇ ಫುಲ್ಬಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಮುಸ್ಲಿಂ ಧರ್ಮ ಗುರು ಸಾಜಿದ್ ರಶೀದಿ ಈ ಕುರಿತು ಪ್ರತಿಕ್ರಿಯಿಸಿ, ಧಾರ್ಮಿಕ ಕಠಿಣವಾದಿಗಳು ಅಥವಾ ಪ್ರಚಾರ ಪಡೆಯಲು ಕೆಲವರು ಈ ರೀತಿ ಮಾಡುತ್ತಿದ್ದಾರೆ. ಇವರಿಗೆ ಭಾರತದ ಸಂಸ್ಕೃತಿ, ಮತ್ತು ಮೌಲ್ಯ ತಿಳಿದಿಲ್ಲ. ನಾವು ಬೆಳಗ್ಗೆ ಎದ್ದಾಗ ಅಜಾನ್ ಹೇಳುತ್ತೇವೆ. ಸಂಜೆ ಪ್ರಾರ್ಥನೆ ಕೇಳುತ್ತೇವೆ. ಧರ್ಮವು ಒಂದು ಕಡೆಯಾದರೆ ಸಂಸ್ಕೃತಿ ಇನ್ನೊಂದು ಕಡೆ ಇದೆ. ಈ ಸಂಸ್ಕೃತಿಯಿಂದಾಗಿ ಭಾರತ ಎಲ್ಲರಿಗೂ ತಿಳಿದಿದೆ. ಇವರು ದ್ವೇಷವನ್ನು ಹರಡಲು ಹಾಗೂ ದೇಶವನ್ನು ವಿಭಜಿಸಲು ಕೆಲವರು ಬಯಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *