ಬೆಂಗಳೂರು: ಆಯುಧ ಪೂಜೆ ಹಿನ್ನೆಲೆಯಲ್ಲಿ ಈ ಮೊದಲೇ ಹೇಳಿದಂತೆ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ನಿರ್ದೇಶಕ ಹೇಳಿದಂತೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ‘ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ರಗ್ಬಿ ಆಟಗಾರನಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ.
“ಈ ದುನಿಯಾದಲ್ಲಿ ಮೂರು ತರ ಗಂಡಸರಿಸುತ್ತಾರೆ. ನಿಯಮವನ್ನು ಪಾಲೋ ಮಾಡೋನು, ನಿಯಮವನ್ನು ಬ್ರೇಕ್ ಮಾಡೋನು, ಮೂರನೇಯವನು ನನ್ನ ತರ ರೂಲ್ ಮಾಡೋನು” ಎಂಬ ಮಾಸ್ ಡೈಲಾಗ್ ಮೂಲಕ ಟೀಸರ್ ಆರಂಭವಾಗಿದೆ. ರಗ್ಬಿ ಆಟದ ಮೃದಾನದಲ್ಲಿ ಅದರಲ್ಲೂ ಮಳೆಯಲ್ಲೇ ಪುನೀತ್ ಖಡಕ್ ಆಟಗಾರನಾಗಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಆಟವನ್ನು ಗೆಲ್ಲುತ್ತಾರೆ.
ಟೀಸರ್ ಬಿಡುಗಡೆಯಾದ ಕೆಲವು ನಿಮಿಷಗಳಲ್ಲೇ 83 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದ್ದು, 28 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಸಿನಿಮಾ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ದಸರಾ ಹಬ್ಬಕ್ಕಾಗಿ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮೊದಲೇ ತಿಳಿಸಿತ್ತು.
ಬಹು ವರ್ಷಗಳ ಬಳಿಕ ಯುವರತ್ನ ಸಿನಿಮಾದಲ್ಲಿ ಪುನೀತ್ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಮೊದಲ ಬಾರಿಗೆ ನಟಿ ಸಯೇಷಾ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದು, ಪ್ರಕಾಶ್ ರೈ, ಸುಧಾರಾಣಿ, ಸೋನುಗೌಡ, ಗುರುದತ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ವಸಿಷ್ಠ ಸಿಂಹ ಸೇರಿದಂತೆ ಬಹುದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ.