ಬೆಂಗಳೂರು: ಅಂದು ಬಳ್ಳಾರಿ ಪಾದಯಾತ್ರೆ ಮೂಲಕ ಸಿದ್ದರಾಮಯ್ಯ ಸಿಎಂ ಪಟ್ಟ ಅಲಂಕರಿಸಿದ್ದರು. ಈಗ ಮತ್ತೆ ಕಾಂಗ್ರೆಸ್ ನಲ್ಲಿ ಬೆಳಗಾವಿ ಟು ಬೆಂಗಳೂರು ಪಾದಯಾತ್ರೆಯ ನೀಲ ನಕ್ಷೆ ಸಿದ್ಧಗೊಂಡಿದ್ದು, ಸಿದ್ದರಾಮಯ್ಯರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ತಿಳಿದು ಬಂದಿದೆ.
2010ರಲ್ಲಿ ಬಳ್ಳಾರಿ ಗಣಿ ಹಗರಣ ವಿರೋಧಿಸಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಬರೋಬ್ಬರಿ 320 ಕಿ.ಮೀ ಪಾದಯಾತ್ರೆ ನಡೆಸಿತ್ತು. ಪಾದಯಾತ್ರೆ ಪರಿಣಾಮ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಮುಂದಾಗಿದ್ದು, ಸಿದ್ದರಾಮಯ್ಯರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಪಾದಯಾತ್ರೆಗೆ ಸಿದ್ಧತೆ ನಡೆಸಿಕೊಂಡಿದೆ ಎನ್ನಲಾಗಿದೆ.
ಕಾಂಗ್ರೆಸ್ ಸಿದ್ಧಪಡಿಸಿಕೊಂಡಿರುವ ನೀಲ ನಕ್ಷೆ ನೋಡಿರುವ ಸಿದ್ದರಾಮಯ್ಯನವರು ಈ ವಯಸ್ಸಲ್ಲಿ ಇದು ಸಾಧ್ಯನಾ ಎಂದು ಪ್ರಶ್ನೆ ಹಾಕಿದ್ದಾರಂತೆ. ಬೆಳಗಾವಿಯಿಂದ ಬೆಂಗಳೂರಿನವರೆಗೆ ನಡೆಯಲು ಶಕ್ತಿ ಬೇಕು. ಇತ್ತೀಚಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.