– ಶನಿವಾರ ಬ್ಯಾಗ್‍ಲೆಸ್ ಡೇ
– 50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ
ಬೆಂಗಳೂರು: ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ನಿಯಮಕ್ಕೆ ಸರ್ಕಾರ ತಿಲಾಂಜಲಿ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬಹಳ ವರ್ಷಗಳ ಹಿಂದೆ ಇದ್ದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್, ಮಕ್ಕಳನ್ನು 10ನೇ ತರಗತಿವರೆಗೆ ಫೇಲ್ ಮಾಡದೇ ಇದ್ದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಈ ವರ್ಷದಿಂದಲೇ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್‍ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಬೋರ್ಡ್ ಪ್ರಶ್ನೆ ಪತ್ರಿಕೆ ತಯಾರಿಸಲಿದೆ. ಉತ್ತರ ಪತ್ರಿಕೆಗಳನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನುತ್ತೀರ್ಣರಾದ ಮಕ್ಕಳಿಗೆ ಪೂರಕ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಪ್ರಶ್ನೆ ಪತ್ರಿಕೆ ಮಾದರಿ, ಯಾವ ರೀತಿ ಅಂಕ ಪದ್ಧತಿ ಎಲ್ಲವನ್ನು ರಚನೆಗೆ ಶಿಕ್ಷಣ ತಜ್ಞರ ತಂಡವನ್ನು ರಚನೆ ಮಾಡುತ್ತೇವೆ. ಒಂದು ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಗದಿದ್ದರೆ, ಈ ಬಗ್ಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ವರ್ಗಾವಣೆ ನಿಯಮ ತಿದ್ದುಪಡಿ
ತೀವ್ರ ಗೊಂದಲಕ್ಕೆ ಕಾರಣವಾಗಿದ್ದ ಕಡ್ಡಾಯ ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಕೆಲ ತಿದ್ದುಪಡಿ ತರಲು ಸರ್ಕಾರ ನಿರ್ಧಾರ ಮಾಡಿದೆ. ಹಿಂದೆ ಇದ್ದ ಕಠಿಣ ನೀತಿಯಿಂದ ಶಿಕ್ಷಕರಿಗೆ ಅನಾನುಕೂಲವಾಗಿತ್ತು. ಹೀಗಾಗಿ ಕಡ್ಡಾಯ ವರ್ಗಾವಣೆ ಎನ್ನುವ ಪದವನ್ನೇ ತೆಗೆದು ಹಾಕಲು ಇಲಾಖೆ ನಿರ್ಧಾರ ಮಾಡಿದೆ. ಇದರಲ್ಲಿದ್ದ ಕಠಿಣ ನಿಯಮಗಳನ್ನು ಸಡಿಲ ಮಾಡಿ ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಸುರೇಶ್ ಕುಮಾರ್ ಶಿಕ್ಷಕರಿಗೆ ಅನುಕೂಲವಾಗುವ ವರ್ಗಾವಣೆ ನಿಯಮ ಜಾರಿಗೆ ತರುತ್ತೇವೆ. ಕಡ್ಡಾಯ ವರ್ಗಾವಣೆಯಲ್ಲಿ ಬದಲಾದ ನಿಯಮಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದರು.
50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ, 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಸಿ(ಗ್ರಾಮೀಣ) ವಲಯದಲ್ಲಿ 15 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರೆ ಅಥವಾ ಆಗಾಗ ಕೆಲಸ ಮಾಡಿದ್ದರೆ ಮತ್ತೆ ಸಿ ವಲಯಕ್ಕೆ ವರ್ಗಾವಣೆ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.
ಕಡ್ಡಾಯ ವರ್ಗಾವಣೆ ನಿಯಮದ ಶೇ.20ರ ಮಿತಿಯನ್ನು ಶೇ.25ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ತೀವ್ರ ಖಾಯಿಲೆಗೆ ತುತ್ತಾದ ಮಕ್ಕಳ ಶಿಕ್ಷಕರಿಗೆ ಹಾಗೂ ವಿಧವೆ ಶಿಕ್ಷಕಿಯರಿಗೂ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.
ಶನಿವಾರ ಬ್ಯಾಗ್ ಲೆಸ್ ಡೇ
ಇನ್ನು ಮುಂದೆ ಪ್ರತಿ ಶನಿವಾರ ಬ್ಯಾಗ್‍ಲೆಸ್ ಡೇ ಮಾಡಲು ನಿರ್ಧರಿಸಲಾಗಿದೆ. ಪಾಠ ಬಿಟ್ಟು ಎನ್‍ಜಿಓ ಸಹಾಯದಿಂದ ಪಠ್ಯೇತರ ಚಟುವಟಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಲು ತಿಳಿಸಲಾಗಿದೆ. ಗ್ರಾಮ್ ಎನ್ನುವ ಎನ್‍ಜಿಓ ನವೆಂಬರ್‍ನಲ್ಲಿ ಪ್ರಾತ್ಯಕ್ಷಿಕೆ ತೋರಿಸಲಿದೆ. ಇದನ್ನು ಪರಿಶೀಲಿಸಿದ ನಂತರ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.
ಶಾಲೆಗಳಲ್ಲಿ ಮಕ್ಕಳ ಸುರಕ್ಷಿತೆ ಬಗ್ಗೆ ಮಹತ್ವದ ನಿರ್ಧಾರ ಮಾಡಿದ್ದೇವೆ. ನಿಮ್ಹಾನ್ಸ್‍ನಿಂದ ಕೆಲ ವರದಿ ಕೂಡ ಬಂದಿತ್ತು. ಪೊಲೀಸ್ ಇಲಾಖೆಯ ಡಿಸಿಪಿ ಮಟ್ಟದಲ್ಲಿ ಬಿಇಓ ಒಳಗೊಂಡ ತಂಡ ರಚನೆಗೆ ನಿರ್ಧಾರ ಮಾಡಲಾಗಿದೆ. ಮಕ್ಕಳ ಸುರಕ್ಷೆ ಬಗ್ಗೆ ಈ ಕಮಿಟಿ ಮಾನಿಟರ್ ಮಾಡುತ್ತದೆ. ಮಕ್ಕಳ ರಕ್ಷಣೆ ನಿಯಮಗಳನ್ನು ಈ ಸಮಿತಿ ಜಾರಿ ಮಾಡಲಿದೆ ಎಂದು ತಿಳಿಸಿದರು.