– ಸಿಬಿಐನಿಂದ ದೆಹಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಕೆ
– ಅ.10 ರಿಂದ ವಿಚಾರಣೆ ಆರಂಭ
ಲಕ್ನೋ: ಉನ್ನಾವೋ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರಿಯ ತನಿಖಾ ದಳ (ಸಿಬಿಐ) ಗುರುವಾರ ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ಮೂವರು ಸಂತ್ರಸ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದೆ.
ಈ ಚಾರ್ಜ್‍ಶೀಟ್‍ನಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.
ಸಂತ್ರಸ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಮೂವರನ್ನು ನರೇಶ್ ತಿವಾರಿ, ಬ್ರಿಜೇಶ್ ಯಾದವ್ ಸಿಂಗ್ ಮತ್ತು ಶುಭಮ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಶುಭಂ ಸಿಂಗ್ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಅವರ ಸಹವರ್ತಿ ಶಶಿ ಸಿಂಗ್ ಅವರ ಪುತ್ರನಾಗಿದ್ದು, ಕುಲದೀಪ್ ಯಾದವ್ ಅವರೇ ಇದನ್ನು ಮಾಡಿಸಿದ್ದಾರೆ ಎಂದು ಆರೋಪಿಸಿದೆ.
ಸಧ್ಯ ಈ ಮೂವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದು, ಈ ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಜೂನ್ 11 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣದಲ್ಲಿ ಶಶಿ ಸಿಂಗ್ ಕೂಡ ಸಹ ಆರೋಪಿಯಾಗಿದ್ದಾನೆ. ಶಶಿ ಸಿಂಗ್ ಆಮಿಷವೊಡ್ಡಿ ಕುಲದೀಪ್ ಸಿಂಗ್ ನಿವಾಸಕ್ಕೆ ಸಂತ್ರಸ್ತೆಯನ್ನು ಕರೆ ತಂದ ಬಳಿಕ ಜೂನ್ 4 2017 ರಂದು ಸಂತ್ರಸ್ತೆಯನ್ನು ಕುಲದೀಪ್ ಸಿಂಗ್ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿದೆ.
ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲು ಅ.10ರಂದು ದಿನ ನಿಗದಿ ಮಾಡಿದೆ. ಇನ್ನು 6 ದಿನ ಸಿಕ್ಕಿದ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯಕ್ಕೆ ಮತ್ತಷ್ಟು ಸಾಕ್ಷ್ಯಗಳನ್ನು ಸಲ್ಲಿಸುವ ಸಾಧ್ಯತೆಯಿದೆ. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ.