ಕೇಂದ್ರ 2 ಸಾವಿರ ಕೋಟಿ ರೂ. ಪರಿಹಾರ ನೀಡಿ ಮುಚ್ಚಿ ಹಾಕುತ್ತೆ, 30 ಸಾವಿರ ಕೋಟಿ ಕೊಡಲ್ಲ- ಎಂ.ಬಿ.ಪಾಟೀಲ್

Public TV
2 Min Read
m.b.patil

ಬೆಂಗಳೂರು: ನಾನು ಬರೆದು ಕೊಡುತ್ತೇನೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿ ಎಲ್ಲಾ ಮುಚ್ಚಿ ಹಾಕುತ್ತಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಮಗೆ ನಿಜಕ್ಕೂ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ ಪ್ರವಾಹ ಸಂತ್ರಸ್ತರನ್ನು ದೇವರೇ ಕಾಪಾಡಬೇಕು. ಕೇಂದ್ರ ಸರ್ಕಾರ 30 ಸಾವಿರ ಕೋಟಿ ರೂ. ಶಾಶ್ವತ ಪರಿಹಾರ ನೀಡುವುದಿಲ್ಲ. 2 ಸಾವಿರ ಕೋಟಿ ರೂ. ನೀಡಬಹುದಷ್ಟೇ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

pm modi

ಇರುವುದರಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿಲ್ಲ. ತಮ್ಮ ಸಿದ್ಧಾಂತ, ಪಕ್ಷ ಎಲ್ಲವನ್ನು ಬಿಟ್ಟು ಪ್ರವಾಹ ಪೀಡಿತರ ಪರವಾಗಿ ಮಾತನಾಡಿದ್ದಾರೆ. ಶೇ.10ರಷ್ಟು ಸಹ ಸಮರ್ಪಕ ಸರ್ವೆ ಆಗಿಲ್ಲ. ಇವರ ನಡವಳಿಕೆಯನ್ನು ನೋಡಿದರೆ ಸತ್ತ ನಂತರ ಹೆಣದ ಮೇಲೆ ಪರಿಹಾರ ಕೊಡುವಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ಸಮಸ್ಯೆ ಪರಿಹರಿಸಲು ಆಗದಿದ್ದರೆ ಯಡಿಯೂರಪ್ಪನವರು ರಾಜೀನಾಮೆ ಕೊಟ್ಟು ಬರಲಿ. ನಾನಾಗಿದ್ದರೆ ಅದನ್ನೇ ಮಾಡುತ್ತಿದ್ದೆ. ಜನರ ಕಣ್ಣೀರು ಒರೆಸದಿದ್ದರೆ ಅಂತಹ ಅಧಿಕಾರ ಯಾಕೆ? ಸಂತ್ರಸ್ತರಿಗೆ ವಿಷದ ಬಾಟಲಿ ಕೊಡುವುದೊಂದು ಬಾಕಿ ಇದೆ. ಯಡಿಯೂರಪ್ಪ ವಿರೋಧ ಪಕ್ಷದವರು ಬೊಬ್ಬೆ ಹೊಡೆಯೋದು ನಿಲ್ಲಿಸಲಿ ಎಂದಿದ್ದಾರೆ. ನಮ್ಮ ಬೊಬ್ಬೆಯಲ್ಲ ಸಂತ್ರಸ್ಥರ ಬೊಬ್ಬೆಯನ್ನಾದರು ನೀವು ಕೇಳಿ. ಬೊಕ್ಕಸ ಖಾಲಿಯಾಗಿದ್ದರೆ ಬಿಎಸ್‍ವೈ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಕಿಡಿಕಾರಿದರು.

bij flood 1

ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿರುವುದು ಸರಿಯಲ್ಲ. ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿದೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ರಾಜ್ಯ ಸರ್ಕಾರದಿಂದಲೂ ಸರಿಯಾದ ಸಮೀಕ್ಷೆ ಆಗಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ಧತೆ, ಇಚ್ಛಾಶಕ್ತಿ ಇಲ್ಲ. ರಾಜ್ಯದ 25 ಸಂಸದರು ಏನು ಮಾಡುತ್ತಿದ್ದಾರೆ. ಬಿಹಾರದ ಪ್ರವಾಹದ ಬಗ್ಗೆ ಮೋದಿ ಟ್ವೀಟ್ ಮಾಡಿದ್ದಾರೆ. ಇಲ್ಲಿ ಬಿಜೆಪಿ ಪಕ್ಷದ ಸರ್ಕಾರ ಇದ್ದರೂ ಈ ಬಗ್ಗೆ ಒಂದೇ ಒಂದು ಸ್ವಾಂತನ ಮಾತನ್ನು ಮೋದಿ ಹೇಳಿಲ್ಲ. 2009ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ 1600 ಕೋಟಿ ರೂ. ತಕ್ಷಣದ ಪರಿಹಾರ ಬಿಡುಗಡೆ ಮಾಡಿದ್ದರು ಎಂದು ಹರಿಹಾಯ್ದರು.

ಈಶ್ವರಪ್ಪ, ಲಕ್ಷಣ ಸವದಿ, ತೇಜಸ್ವಿ ಸೂರ್ಯ, ಮಾಧು ಸ್ವಾಮಿ ಸೇರಿದಂತೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರನ್ನು ಕರೆದುಕೊಂಡು ಹೋಗಿ ಪ್ರವಾಹದ ನಡುಗಡ್ಡೆಯಲ್ಲಿ ನಿಲ್ಲಿಸಬೇಕು. ಆಗ ಅವರಿಗೆ ಪ್ರವಾಹದ ಪರಿಸ್ಥಿತಿ ಏನೆಂದು ಅರ್ಥವಾಗುತ್ತದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದರೆ ರಾಜೀನಾಮೆ ನೀಡಿ ಹೊರಗೆ ಬನ್ನಿ. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಿ, ಈ ಸಮಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಇನ್ನು ಯಾವಾಗ ಸ್ಪಂದಿಸುತ್ತೀರಾ ಹೇಳಿ ಎಂದು ಪ್ರಶ್ನಿಸಿದರು.

blg ramadhurga flood

ಬೆಳಗಾವಿ ಅಧಿವೇಶನಕ್ಕೆ ನಾವು ಒತ್ತಾಯಿಸಿದ್ದೆವು. ಅಲ್ಲಿ ಅಧಿವೇಶನ ನಡೆದಿದ್ದರೆ ನೈತಿಕ ಶಕ್ತಿ ಸಿಗುತ್ತಿತ್ತು. ಅಲ್ಲಿನ ಜನರಿಗೆ ನೈತಿಕ ಬಲ ಬರುತ್ತಿತ್ತು. ಆದರೆ ಈಗ ಬೆಂಗಳೂರಿನಲ್ಲಿ ನಡೆಸುತ್ತಿದ್ದಾರೆ. ಕನಿಷ್ಠ ಪಕ್ಷ 10 ದಿನವಾದರೂ ಅಧಿವೇಶನ ನಡೆಸಬೇಕು ಎನ್ನುವುದು ನಮ್ಮ ಒತ್ತಾಯ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *