ಫೋನ್ ಟ್ಯಾಪಿಂಗ್ ದೊಡ್ಡ ಅಪರಾಧ- ಎಂ.ಬಿ.ಪಾಟೀಲ್

Public TV
1 Min Read
MB Patil

ವಿಜಯಪುರ: ಯಾರದ್ದೇ ಫೋನ್ ಟ್ಯಾಪ್ ಮಾಡಿದರೂ ಅದು ತಪ್ಪು. ಸ್ವಾಮೀಜಿಗಳು ಹಿರಿಯರು ಅವರ ಫೋನ್ ಟ್ಯಾಪ್ ಮಾಡುವುದು ಇನ್ನೂ ದೊಡ್ಡ ಅಪರಾಧ ಎಂದು ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಬಿಡಿ, ಜನ ಸಾಮಾನ್ಯನ ಫೋನ್ ಟ್ಯಾಪ್ ಮಾಡಿದರೂ ಅದು ಅಪರಾಧ. ಪತ್ರಕರ್ತರ ಫೋನ್ ಟ್ಯಾಪ್ ಮಾಡಿದರೆ ಘೋರ ಅಪರಾಧ. ರಾಮಕೃಷ್ಣ ಹೆಗಡೆಯಂತವರು ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಫೋನ್ ಕದ್ದಾಲಿಕೆ ಎಷ್ಟು ಸತ್ಯ, ಎಷ್ಟು ಸುಳ್ಳು ಎನ್ನುವುದನ್ನು ಕಾದು ನೋಡಬೇಕಿದೆ. ತನಿಖೆ ನಡೆಯುತ್ತಿದೆ ನೋಡೋಣ ಎಂದರು.

HDK phone tapping 1

ಈಶ್ವರಪ್ಪನವರು ಮಹಾ ಮೇಧಾವಿ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ನಾನು ದೊಡ್ಡವನಲ್ಲ. ಈಶ್ವರಪ್ಪನವರನ್ನು ಬಿಟ್ಟು ಬೇರೆ ಯಾರೇ ಹೇಳಿಕೆ ಕೊಟ್ಟರು ಪ್ರತಿಕ್ರಿಯೆ ಕೊಡುತ್ತೇನೆ ಎಂದು ಸಚಿವ ಈಶ್ವರಪ್ಪನವರ ಕಾಲೆಳೆದರು.

ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೆ. ಆದರೆ ಯೋಗೇಶಗೌಡ ಪ್ರಕರಣದಲ್ಲಿ ವಿನಯ ಕುಲಕರ್ಣಿ ಹೆಸರು ಇಲ್ಲ. ಚಾರ್ಜ್ ಶೀಟ್‍ನಲ್ಲೂ ವಿನಯ ಕುಲಕರ್ಣಿ ಹೆಸರಿಲ್ಲ. ಪ್ರಕರಣಕ್ಕೂ ವಿನಯ ಕುಲಕರ್ಣಿಗೂ ಸಂಬಂಧವಿಲ್ಲ. ಸುಮ್ಮನೆ ಮಾಧ್ಯಮದವರು ಅವರ ಹೆಸರನ್ನು ಎಳೆದು ತರುತ್ತಿದ್ದೀರಿ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು.

M B Patil vinay kulkarni

ವಿಜಯನಗರ ಪ್ರತ್ಯೇಕ ಜಿಲ್ಲೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಜನರು, ಹಿರಿಯರ ಅಭಿಪ್ರಾಯವನ್ನು ಸರ್ಕಾರ ತೆಗೆದುಕೊಳ್ಳಬೇಕು. ತೀರ್ಮಾನ ತೆಗೆದುಕೊಳ್ಳುವ ಮೊದಲು ಸರ್ಕಾರ ಪರಿಶೀಲಿಸಬೇಕು. ಮುಂಚಿತವಾಗಿಯೇ ಯೋಚಿಸಬೇಕು ಈಗಲೂ ಕಾಲ ಮಿಂಚಿಲ್ಲ. ನಾನು ಯಾರ ಪರವಾಗಿಯೂ ಇಲ್ಲ, ವಿರುದ್ಧವೂ ಇಲ್ಲ ಅಲ್ಲಿನ ಸ್ಥಳೀಯರು, ಬೇಕು-ಬೇಡ ಎನ್ನುವವರ, ಬುದ್ಧಿಜೀವಿಗಳ ಅಭಿಪ್ರಾಯ ಪಡೆದು ಸರ್ಕಾರ ನಿರ್ಣಯ ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *