ಬೆಂಗಳೂರು: ನಿರ್ದೇಶಕ ಎ.ಪಿ. ಅರ್ಜುನ್ ಮೊದಲ ಚಿತ್ರ ‘ಅಂಬಾರಿ’ಯ ಮೂಲಕವೇ ಗೆಲುವಿನ ಮೆರವಣಿಗೆ ಶುರು ಮಾಡಿರೋ ಪ್ರತಿಭಾವಂತ ನಿರ್ದೇಶಕ. ಕಥೆಯನ್ನು ಆರಿಸಿಕೊಳ್ಳೋದರಿಂದ ಹಿಡಿದು ಅದನ್ನು ಪರಿಣಾಮಕಾರಿ ಪಾತ್ರ ಮತ್ತು ದೃಶ್ಯಗಳಿಂದ ಅಲಂಕರಿಸುವವರೆಗೂ ಅರ್ಜುನ್ ಮೊದಲ ಚಿತ್ರದಲ್ಲಿಯೇ ಗೆದ್ದಿದ್ದರು. ಅದಾದ ನಂತರದ ಸಿನಿಮಾಗಳಲ್ಲಿಯೂ ಕೂಡಾ ನೆನಪಿಟ್ಟುಕೊಳ್ಳುವಂಥಾ ಪಾತ್ರ ಮತ್ತು ಅದಕ್ಕೊಂದು ನಾಮಕರಣ ಮಾಡೋದರಲ್ಲಿಯೂ ಅರ್ಜುನ್ ಪರಿಣಿತರು. ಈ ಸಿನಿಮಾದಲ್ಲಿಯೂ ಅದುವೇ ಮುಂದುವರಿದಿದೆ. ಇದರ ಮೂಲಕವೇ ನಾಯಕಿಯಾಗಿ ಆಗಮಿಸಿರೋ ಶ್ರೀಲೀಲಾ ಇಲ್ಲಿ ನಂದಿನಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
ನಾಯಕಿಯ ಪಾತ್ರದ ಹೆಸರೇ ಹೊಸ ಕ್ರೇಜ್‍ಗೆ ಕಾರಣವಾದ ಅದೆಷ್ಟೋ ಉದಾಹರಣೆಗಳಿವೆ. ಆದ್ದರಿಂದಲೇ ಸಿನಿಮಾಗಳಲ್ಲಿ ನಾಯಕಿಯರ ಹೆಸರೇನಿರುತ್ತದೆ ಎಂಬಂಥಾ ಕುತೂಹಲದ ಕ್ರೇಜ್ ಕೂಡಾ ಪ್ರೇಕ್ಷಕರಲ್ಲಿದೆ. ಆದರೆ ಕಿಸ್ ಚಿತ್ರದಲ್ಲಿನ ನಾಯಕಿ ಪಾತ್ರದ ಹೆಸರು ಈಗಾಗಲೇ ರಿವೀಲ್ ಆಗಿದೆ. ನವನಾಯಕಿ ಶ್ರೀಲೀಲಾ ಇಲ್ಲಿ ನಂದಿನಿ ಎಂಬ ಹೆಸರಿನಲ್ಲಿ ನಟಿಸಿದ್ದಾರೆ. ನಂದಿನಿ ಅನ್ನೋ ಪಾತ್ರ ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಾಯಕಿಯ ಹೆಸರಾಗಿದೆ. ಹಾಗಿರುವಾಗ ಕಿಸ್‍ನಲ್ಲಿಯೂ ಏಕೆ ಅದೇ ಹೆಸರನ್ನಿಡಲಾಗಿದೆ ಅನ್ನೋ ಪ್ರಶ್ನೆ ಎದುರಾಗುತ್ತದೆ.
ನಾಯಕಿ ಶ್ರೀಲೀಲಾಗೂ ಕೂಡಾ ಈವರೆಗೆ ಅಡಿಗಡಿಗೆ ಇಂಥಾ ಪ್ರಶ್ನೆಗಳು ಎದುರಾಗಿವೆಯಂತೆ. ಸಂದರ್ಶನಗಳಲ್ಲಿಯೂ ಅವರು ಈ ಪ್ರಶ್ನೆಯನ್ನು ಎದುರಿಸಿದ್ದಾರೆ. ಆದರೆ ಯಾಕೆ ನಂದಿನಿ ಎಂಬ ಹೆಸರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡೋ ಹಾಗಿಲ್ಲವಾದ್ದರಿಂದ ಶ್ರೀಲೀಲಾ ಅಂಥಾ ಪ್ರಶ್ನೆಗಳಿಗೆ ಮುಗುಳುನಗೆಯನ್ನೇ ಉತ್ತರವಾಗಿ ರವಾನಿಸಿ ಪಾರಾಗುತ್ತಾ ಬಂದಿದ್ದಾರೆ. ಯಾಕೆಂದರೆ ಈ ಹೆಸರನ್ನೇ ಆರಿಸಿಕೊಂಡಿದ್ದರ ಹಿಂದೊಂದು ನಿಗೂಢವಿದೆ. ಅದು ಏನೆಂಬುದು ಇದೇ ತಿಂಗಳ 27ರಂದು ಎಲ್ಲರಿಗೂ ತಿಳಿಯಲಿದೆ.