-ರಣರಂಗ ಶುರುವಾಗಿದೆ, ನೋಡೋಣ
ಬೆಂಗಳೂರು: ರಾಕೇಶ್, ಕುಡಿದು ಸತ್ತರು ಎಂದು ಎಲ್ಲಿದೆ ರಿಪೋರ್ಟ್ ಎಂದು ಪ್ರಶ್ನಿಸುವ ಮೂಲಕ ಶಾಸಕ ಬೈರತಿ ಸುರೇಶ್ ಅವರು ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರಿಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಬೈರತಿ ಸುರೇಶ್ ಕಾರಣ ಎಂಬ ಎಂಟಿಬಿ ನಾಗರಾಜು ಹೇಳಿಕೆ ವಿಚಾರವಾಗಿ ಗುಡುಗಿದ ಸುರೇಶ್, ಎಂಟಿಬಿ ನಾಗರಾಜ್ ಅವರಿಗೆ ಅವರ ಸಂಸಾರ ಬಿಟ್ಟರೆ, ಇನ್ಯಾರೂ ಕಣ್ಣಿಗೆ ಕಾಣಿಸಲ್ಲ. ರಾಕೇಶ್, ಕುಡಿದು ಸತ್ರು ಎಂದು ಎಲ್ಲಿದೆ ರಿಪೋರ್ಟ್? ಅವರು ನೈತಿಕತೆ ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯ ಪುತ್ರ ಸಾವನ್ನಪ್ಪಲು ಭೈರತಿ ಸುರೇಶ್ ಕಾರಣ- ಎಂಟಿಬಿ
ಎಂಟಿಬಿ ನಾಗರಾಜ್‍ಗೆ ಕೇವಲ ಅವರ ಕುಟುಂಬ ಮುಖ್ಯ. ಆದರೆ ಸಿದ್ದರಾಮಯ್ಯ ಆ ರೀತಿ ಅಲ್ಲ ಅಹಿಂದ ವರ್ಗದಿಂದ ಎಲ್ಲರನ್ನು ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ. ಎಂಟಿಬಿ ನಾಗರಾಜ್‍ಗೆ ಸೋಲಿನ ಭಯ ಕಾಡುತ್ತಿದೆ. ಆದ್ದರಿಂದ ಈ ರೀತಿ ಬಾಲಿಶವಾದ ಹೇಳಿಕೆ ಕೊಡುತ್ತಿದ್ದಾರೆ. ಸಣ್ಣ ಮಕ್ಕಳು ಕೂಡ ಕೊಡದಂತಹ ಹೇಳಿಕೆಗಳನ್ನು ಎಂಟಿಬಿ ನಾಗರಾಜ್ ಕೊಡುತ್ತಿದ್ದಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದೇ ವೇಳೆ ಬೈರತಿ ಸುರೇಶ್ ಬಚ್ಚಾ ಎಂದು ಹೇಳಿದ್ದ ಎಂಟಿಬಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಬೈರತಿ, ನಾನು ರಾಜಕೀಯಕ್ಕೆ ಬಂದು 8 ವರ್ಷ ಆದಮೇಲೆಯೂ ನನ್ನ ಬಚ್ಚಾ ಎಂದು ಕರೆದರೆ ಏನ್ ಹೇಳಲಿ. ಅವರು ಹುಟ್ಟಿದ ತಕ್ಷಣ ಶಾಸಕರಾಗಿದ್ರಾ? ನಿನ್ನೆ ತನಕ ಯಾವುದೇ ಅಸಮಾಧಾನ ನನ್ನ ಮೇಲೆ ಇರಲಿಲ್ಲ. ಇದ್ದಕ್ಕಿದ್ದಂತೆ ನನ್ನ ಮೇಲೆ ಈಗ ಅಸಮಾಧಾನ ಶುರುವಾಗಿದೆ. ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರೆ ಆರೋಪ ಮಾಡೋದಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನಿಂದ ಗೆದ್ದು, ಇವರು ಈಗ ಬಿಜೆಪಿ ಮನೆ ಸೇರಿದ್ದಾರೆ. ಆದರೆ ಬೇರೆಯವರು ಯಾವ ಪಕ್ಷದಿಂದ ಬಂದರು ಎಂದು ಹೇಳೋಕೆ ಏನು ನೈತಿಕತೆ ಇದೆ ಅವರಿಗೆ. ಎಂಟಿಬಿ ಸಂಸ್ಕಾರ ಬಿಟ್ಟು ಮಾತನಾಡುತ್ತಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಪಕ್ಷದ ರಾಜಕಾರಣ ಮಾಡುತ್ತಿದ್ದೇನೆ. ರಣರಂಗ ಶುರುವಾಗಿದೆ, ನೋಡೋಣ ಎಂದು ಎಂಟಿಬಿಗೆ ಬೈರತಿ ಸವಾಲ್ ಹಾಕಿದರು.