ನದಿ ಪುನಶ್ಚೇತನಕ್ಕೆ ಯುವ ಬ್ರಿಗೇಡ್‍ನಿಂದ ರನ್ ಫಾರ್ ವೃಷಭಾವತಿ

Public TV
1 Min Read
Vrushabhavati web

ಬೆಂಗಳೂರು: ಒಂದು ಕಾಲದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ವೃಷಭಾವತಿ ನದಿ ಇದೀಗ ಕೆಂಗೇರಿ ಮೋರಿಯಾಗಿ ಪರಿವರ್ತನೆಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ಪಣ ತೊಟ್ಟಿದ್ದು, ವೃಷಭಾವತಿ ಉಳಿಸಲು ರನ್ ಫಾರ್ ವೃಷಭಾವತಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿತು.

ಜೀವಜಲ, ನದಿ ಮೂಲಗಳನ್ನು ಉಳಿಸಿ ಎನ್ನುವ ಕೂಗು ಎಲ್ಲೆಡೆಯಿಂದಲೂ ಕೇಳಿಬರುತ್ತಿದೆ. ಕಾವೇರಿ ಕೂಗಿಗೆ ವ್ಯಾಪಕ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಈಗ, ಒಂದು ಕಾಲದಲ್ಲಿ ಬೆಂಗಳೂರಿನ ಜೀವನಾಡಿಯಾಗಿದ್ದ ವೃಷಭಾವತಿ ಉಳಿಸಿ ಅನ್ನೋ ಕೂಗು ಸಹ ಕೇಳಿಬರುತ್ತಿದೆ. ಯುವ ಬ್ರಿಗೇಡ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಸಿನಿಮಾ ಸ್ಟಾರ್‍ಗಳು ಸೇರಿದಂತೆ ಸಾವಿರಾರು ಜನ ಕೈ ಜೋಡಿಸಿದ್ದು, ರನ್ ಫಾರ್ ವೃಷಾಭಾವತಿ ಮೂಲಕ ಗಮನ ಸೆಳೆಯಲಾಯಿತು.

Vrushabhavati 1

ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕೆಂಗೇರಿ ಉಪನಗರದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೂ 6 ಕಿ.ಮೀ. ಮ್ಯಾರಥಾನ್ ನಡೆಸಲಾಯಿತು. 3 ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು. ನಗರದ ಮಧ್ಯ ಹರಿಯುತ್ತಿರುವ ವೃಷಾಭಾವತಿ ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚು ಜನ ಭಾಗವಹಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಉತ್ತಮ ಆರಂಭವಾದಂತಾಗಿದೆ. ನದಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ತಜ್ಞರು, ಬಿಬಿಎಂಪಿ ಎಂಜಿನಿಯರ್ ಹಾಗೂ ಸರ್ಕಾರದೊಂದಿಗೆ ಚರ್ಚಿಸಲಾಗಿದ್ದು 3 ವರ್ಷದಲ್ಲಿ ನದಿಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ತಿಳಿಸಿದರು.

ಅಭಿಯಾನದಲ್ಲಿ ಸಂಸದ ತೇಜಸ್ವಿಸೂರ್ಯ, ತೇಜಸ್ವಿನಿ ಅನಂತ್ ಕುಮಾರ್, ನಟ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಮಳೆಯನ್ನು ಲೆಕ್ಕಿಸದೇ 6 ಕಿ.ಮೀ ಓಡುವ ಮೂಲಕ ಜಾಗೃತಿ ಮೂಡಿಸಿದರು. ಸೇವ್ ವೃಷಭಾವತಿ ಎಂಬ ಕೂಗು ಜೋರಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *