ಮಡಿಕೇರಿ: ಸೇತುವೆ ಮೇಲೆ ಚಲಿಸುತ್ತಿದ್ದ ಕಾರೊಂದು ಆಯತಪ್ಪಿ ಪಕ್ಕದಲ್ಲೇ ಹರಿಯುತ್ತಿದ್ದ ನೀರಿನ ಹಳ್ಳಕ್ಕೆ ಬಿದ್ದ ಘಟನೆ ಮಡಿಕೇರಿ ತಾಲೂಕಿನ ಬಲಮುರಿಯಲ್ಲಿ ನಡೆದಿದೆ.
ಕೇರಳ ಮೂಲದ ನಾಲ್ವರು ಯುವಕರಿದ್ದ ಕಾರು ಆಯತಪ್ಪಿ ನೀರಿಗೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಹಾನಿಯಾಗಿಲ್ಲ. ಬಲಮುರಿಯಿಂದ ಮಡಿಕೇರಿ ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಲಮುರಿ ಬಳಿ ಇದ್ದ ಸೇತುವೆ ರಸ್ತೆ ಮೇಲೆ ಕಾರು ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ನೀರು ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿದೆ.
ಕಾರು ಅಪಘಾತ ಸಂಭವಿಸುತ್ತಿದ್ದಂತೆ ಅದನ್ನು ಕಂಡ ಸ್ಥಳೀಯರು ತಕ್ಷಣ ಕಾರಿನಲ್ಲಿದವರ ಸಹಾಯಕ್ಕೆ ಬಂದಿದ್ದಾರೆ. ಸ್ಥಳೀಯರ ಸಾಹಾಯದಿಂದ ಕಾರಿನಲ್ಲಿದ್ದ ಕೇರಳದ ಅಬೀಬ್, ಆದೀಲ್ ಸೇರಿ ನಾಲ್ವರು ಯುವಕರನ್ನು ಪ್ರಾಣ ಅಪಾಯದಿಂದ ರಕ್ಷಿಸಿದ್ದಾರೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.