ಅನರ್ಹರು ಬಿಜೆಪಿ ಸೇರುತ್ತಾರೆ, ಸ್ಪರ್ಧಿಸುವ ಅವಕಾಶ ಸಿಗುತ್ತೆ – ಸದಾನಂದಗೌಡ

Public TV
2 Min Read
DV SADANANDA GOWDA

ಉಡುಪಿ: ಅನರ್ಹತೆ ಹೊಂದಿದ ಶಾಸಕರಿಗೆ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಸಿಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅನರ್ಹ ಶಾಸಕರ ಕುರಿತು ಭರವಸೆಯ ಮಾತುಗಳನ್ನಾಡಿದ್ದಾರೆ.

ಉಪಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಹಿನ್ನೆಲೆ ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸೋಮವಾರ ಸುಪ್ರೀಂ ಕೋರ್ಟ್‍ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥ ಆಗಬಹುದು. ನಾಮಪತ್ರ ಸಲ್ಲಿಸಲು ಇನ್ನೂ ಹಲವು ದಿನ ಬಾಕಿ ಇದೆ. ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆಗಳು ಆಗಿದೆ. ಇದು ಸೋಮವಾರ ಇತ್ಯರ್ಥವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Rebel MLAs B 1

ಅನರ್ಹರು ಮೊದಲು ಬಿಜೆಪಿ ಸೇರುತ್ತಾರೆ. ನಂತರ ಬಿಜೆಪಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಕ್ಷದ ತೀರ್ಮಾನಕ್ಕೆ ಅನರ್ಹ ಶಾಸಕರು ಬದ್ಧರಾಗಿದ್ದರೆ ಅವರು ಬಿಜೆಪಿಯಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಸದಾನಂದಗೌಡರು ಸ್ಪಷ್ಟಪಡಿಸಿದ್ದಾರೆ.

ನಾವು ಚುನಾವಣೆಗೆ ಸಿದ್ಧರಿದ್ದೇವೆ, ಸರ್ಕಾರ ರಚನೆಯಾದಾಗಿನಿಂದಲೂ ಚುನಾವಣೆಗೆ ತಯಾರಿ ಶುರು ಮಾಡಿದ್ದೇವೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ಕನಸನ್ನು ಜನ ಕಂಡಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಶಾಸಕರು ಅಯೋಗ್ಯ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

CKM Siddu

ನೆರೆ ಪರಿಹಾರ ಸದುಪಯೋಗ ಆಗುವಾಗ ಕೇಂದ್ರ ಸರ್ಕಾರ ಪರಿಹಾರ ಕೊಡುತ್ತದೆ. ಕೇಂದ್ರ ಸರ್ಕಾರ ಎಸ್‍ಡಿಆರ್‍ಎಫ್ ನಿಂದ ಈಗಾಗಲೇ 380 ಕೋಟಿ ರೂ. ಕೊಟ್ಟಿದೆ. ನೆರೆ ನಷ್ಟದ ವರದಿಗಳನ್ನು ಗೃಹ ಇಲಾಖೆ ಪಡೆದುಕೊಂಡಿದೆ. ತಾತ್ಕಾಲಿಕ ಪರಿಹಾರಕ್ಕೆ ರಾಜ್ಯದಲ್ಲಿ ಸಾಕಷ್ಟು ದುಡ್ಡು ಇದೆ. ಕೇಂದ್ರದ ನೆರೆ ಪರಿಹಾರ ಬೇಡ, ರಾಜ್ಯದ ಬೊಕ್ಕಸದಲ್ಲಿ ಸಾಕಷ್ಟು ಹಣ ಇದೆ ಅಂದಿರುವ ಸಂಸದ ತೇಜಸ್ವಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಡಿವಿಎಸ್, ಸಂಸದರು ಸದ್ಯಕ್ಕೆ ಪರಿಹಾರ ಬೇಡ ಅಂದಿರಬಹುದು. ಆದರೆ ಶಾಶ್ವತ ಕಾಮಗಾರಿಗೆ ಕೇಂದ್ರದ ಅನುದಾನ ಅವಶ್ಯಕ. ಅಷ್ಟು ದೊಡ್ಡ ಮೊತ್ತ ಕೇಂದ್ರ ದಿಂದ ಕೊಡಲು ಮಾತ್ರ ಸಾಧ್ಯ ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡದ್ದೇ ಆಶ್ಚರ್ಯ. ಅವರಪ್ಪ- ಇವರಪ್ಪ ಅಂತ ಬೈದುಕೊಂಡವರು ಒಂದಾದದ್ದು ಬಹಳ ವಿಶೇಷ. ಅಧಿಕಾರಕ್ಕಾಗಿ ಮೈತ್ರಿಯಾದದ್ದು ಹೆಚ್ಚು ಬಾಳಿಕೆ ಬರಲ್ಲ. ಎರಡೂ ಪಕ್ಷದ ಸಜ್ಜನ ಶಾಸಕರು ಮೈತ್ರಿಯಿಂದ ನೊಂದು ಹೊರ ಬರಬೇಕಾಯ್ತು ಎಂದರು.

BLG FLOOD

ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿವಿಎಸ್, ಅಧಿಕಾರಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತವೆ. ಕುರ್ಚಿಗಾಗಿ ಅಂತಹ ಹೇಳಿಕೆ ಸಾಮಾನ್ಯ. ಸಿದ್ದರಾಮಯ್ಯನವರಿಗೆ ಮತ್ತೆ ಸಿಎಂ ಆಗುವ ಆಸೆಯಿದೆ. ಸೋತರೂ ಗೆದ್ದರೂ ಅವರಿಗೆ ಯಾವುದಾದರೂ ಕುರ್ಚಿ ಬೇಕೆ ಬೇಕು. ಕುಮಾರಸ್ವಾಮಿಯನ್ನು ಇಳಿಸಿ ಕುರ್ಚಿ ಹಿಡಿಯಲಿಲ್ವೇ? ಇದೆಲ್ಲ ಪಕ್ಷದ ವರಿಷ್ಠರಿಗೆ ಗೊತ್ತಾಗಿದೆ. ಅದೇ ಕಾರಣಕ್ಕೆ ಸೋನಿಯಾ ಗಾಂಧಿ ಭೇಟಿಗೆ ಅವಕಾಶ ಸಿಗಲಿಲ್ಲ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಎಲ್ಲ ಪಕ್ಷಕ್ಕೆ ಹೋಗಿ ಬಂದರು. ಆದರೆ ಬಿಜೆಪಿಯಲ್ಲಿ ಮಾತ್ರ ಸಿದ್ದರಾಮಯ್ಯನವರಿಗೆ ಪ್ರವೇಶವಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *