ಕೊಟ್ಟ ಮಾತು ಉಳಿಸಿಕೊಳ್ಳದ ರಾಹುಲ್ ಕ್ಷಮೆ ಕೇಳಲಿ- ಕೈ ನಾಯಕ, ದಿಗ್ವಿಜಯ್ ಸಿಂಗ್ ಸಹೋದರ

Public TV
1 Min Read
laxman singh

ಭೋಪಾಲ್: ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಗಾಂಧಿ ಮಾತು ತಪ್ಪಿದ್ದು, ಈ ಕುರಿತು ಜನತೆ ಬಳಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕಿರಿಯ ಸಹೋದರ ಲಕ್ಷ್ಮಣ್ ಸಿಂಗ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ಮಧ್ಯಪ್ರದೇಶದ ರೈತರ ಬಾಕಿ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದು, ಹೀಗಾಗಿ ರಾಹುಲ್ ಗಾಂಧಿ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

rahul gandhi

ಭರವಸೆ ಈಡೇರಿಸದೇ ದೂರ ಇರುವುದರಿಂದ ಹಾಗೂ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡದಿರುವುದರಿಂದ ಕ್ಷಮೆಯಾಚಿಸಬೇಕು. ಇಂತಹ ಭರವಸೆಗಳನ್ನು ನೀಡಬಾರದು. ಭರವಸೆ ನೀಡುವ ಬದಲು ರೈತರ ಸಂಪೂರ್ಣ ಸಾಲವನ್ನು ಯಾವಾಗ ಮನ್ನಾ ಮಾಡಲಾಗುವುದು ಎಂದು ಸಮಯದ ಚೌಕಟ್ಟನ್ನು ನಿಗದಿಪಡಿಸಬೇಕು ಎಂದು ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

ಕಳೆದ ವರ್ಷ ಜೂನ್‍ನಲ್ಲಿ ರಾಜ್ಯದ ಮಂಡ್‍ಸೌರ್ ಜಿಲ್ಲೆಯಲ್ಲಿ ನಡೆದ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ರಾಹುಲ್ ಗಾಂಧಿ ಈ ಭರವಸೆ ನೀಡಿದ್ದರು. ಆಗ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ, ರಾಜಸ್ಥಾನ ಮತ್ತು ಚತ್ತಿಸ್‍ಗಢದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಆಡಳಿತ ವಹಿಸಿಕೊಂಡ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದರು.

Digvijaya Singh

ನನ್ನನ್ನೂ ಸೇರಿದಂತೆ ಎಲ್ಲ ಕಾಂಗ್ರೆಸ್ ಶಾಸಕರು ಪ್ರತಿದಿನ ರೈತರನ್ನು ಭೇಟಿಯಾಗುತ್ತೇವೆ. ರಾಜ್ಯ ಸರ್ಕಾರ ಅವರಿಗೆ ಸಾಲ ಮನ್ನಾ ಪತ್ರಗಳನ್ನು ನೀಡಿದ್ದರೂ, ಸಂಬಂಧಪಟ್ಟ ಬ್ಯಾಂಕ್ ಆಡಳಿತದ ಮಟ್ಟದಲ್ಲಿ ಇನ್ನೂ ಸಾಲ ಮನ್ನಾ ಆಗಿಲ್ಲ ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಏನು ಮಾಡಲು ಸಾಧ್ಯ ಎಂದು ಲಕ್ಷಣ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಚಚೋಡಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಲಕ್ಷ್ಮಣ್ ಸಿಂಗ್ ಅವರು, ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಕಳೆದ ತಿಂಗಳು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಹ ಅವರು ಹಾಡಿಹೊಗಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *