ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ವಿಳಂಬವಾಗ್ತಿರೋದು ಅನರ್ಹ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಮೊನ್ನೆ ಮೊನ್ನೆ ತಾನೇ ನಾರಾಯಣಗೌಡ ಬಿಜೆಪಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು.
ಈಗ ಬಿಸಿ ಪಾಟೀಲ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನನಗೆ ಈ ಪ್ರಕ್ರಿಯೆ ಬೇಸರ ತಂದಿದೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹಾಗೂ ಕೋರ್ಟ್ ಪ್ರಕ್ರಿಯೆಯ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.
ಕೋರ್ಟ್ ಕಲಾಪಕ್ಕೆ ವೆಚ್ಚ ಆಗುತ್ತಿರೊದು ದುಬಾರಿ, ಆದರೆ ಬೇರೆ ದಾರಿಯಿಲ್ಲ. ತಾಳಿದವನು ಬಾಳಿಯನು ಎಂಬಂತೆ ಕಾದುನೋಡುತ್ತಿದ್ದಿವಿ. ಮೊದಲಿಗೆ ನಾವು ಈ ವಿಚಾರದಲ್ಲಿ ಕೋರ್ಟ್‍ಗೆ ಹೋಗಬೇಕು ಎಂದುಕೊಂಡಿರಲಿಲ್ಲ. ಆದರೆ ರಮೇಶ್ ಕುಮಾರ್ ಅವರ ರಾಜಕೀಯ ಪ್ರೇರಿಪಿತವಾಗಿ ನೀಡಿದ ಕೆಟ್ಟ ತೀರ್ಪು ನಮ್ಮನ್ನು ಕೋರ್ಟ್‍ಗೆ ಹೋಗುವ ಹಾಗೇ ಮಾಡಿತು ಎಂದು ಕಿಡಿಕಾರಿದರು.
ಇದೇ ವೇಳೆ ಔರಾದ್ಕರ್ ವರದಿಯ ಪ್ರಕಾರ ಪೊಲೀಸರಿಗೆ ವೇತನವನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ಮೋಟಾರು ವೆಹಿಕಲ್ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ದಂಡ ಹೆಚ್ಚಾಗಿರೊದು ಸ್ವಾಗತಾರ್ಹ. ತಪ್ಪು ಮಾಡಬೇಡಿ ದಂಡ ಬೀಳಲ್ಲ ಎಂದು ಅನರ್ಹ ಶಾಸಕ ಬಿಸಿ ಪಾಟೀಲ್ ಹೇಳಿದರು.