– ‘ಪೈಲ್ವಾನ್’ ಸಿನಿಮಾ ಸೂಪರ್ ಮೇಕಿಂಗ್ ಅಂದ್ರು ಶಿವಣ್ಣ
– ಕುಟುಂಬದಲ್ಲಿ ಒಂದಾಗಿರೋದನ್ನು ಕಲಿಬೇಕು
ಬೆಂಗಳೂರು: ಬಾಕ್ಸ್ ಆಫೀಸ್ ಭಾರೀ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾವ್’ ಸಿನಿಮಾದ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಒರಾಯನ್ ಮಾಲ್‍ನಲ್ಲಿ ‘ಪೈಲ್ವಾನ್’ ಸಿನಿಮಾ ವೀಕ್ಷಿಸಿ ಮಾತನಾಡಿದ ಶಿವಣ್ಣ, ಪೈಲ್ವಾನ್ ಸಿನಿಮಾ ಮೇಕಿಂಗ್ ತುಂಬಾ ಚೆನ್ನಾಗಿದೆ. ಸಂಸ್ಕೃತಿಯನ್ನು ಉತ್ತಮವಾಗಿ ಬಿಂಬಿಸಲಾಗಿದೆ. ಸುದೀಪ್ ಅಭಿನಯ ಅದ್ಭುತವಾಗಿದ್ದು, ಪಾತ್ರಕ್ಕೆ ತಕ್ಕಂತೆ ಮೈಕಟ್ಟು ಬೆಳೆಸಿಕೊಂಡಿದ್ದಾರೆ. ನಿರ್ದೇಶಕ ಎಸ್.ಕೃಷ್ಣ ಅವರು ಕೂಡ ಉತ್ತಮ ಸಿನಿಮಾವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸೈಬರ್ ಕ್ರೈಂಗೆ ಪೈಲ್ವಾನ್ ಚಿತ್ರತಂಡ ದೂರು
ಎಸ್.ಕೃಷ್ಣ ಅವರು ‘ಕಡ್ಡಿಪುಡಿ’ ಸಿನಿಮಾದಲ್ಲಿ ಕ್ಯಾಮೆರಾಮೆನ್ ಆಗಿ ನನ್ನ ಜೊತೆಗೆ ಕೆಲಸ ಮಾಡಿದ್ದರು. ಆದರೆ ಈಗ ಉತ್ತಮ ನಿರ್ದೇಶಕರಾಗಿ ಬೆಳೆಯುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಗಜಕೇಸರಿ’ ಹಾಗೂ ಎರಡನೇ ಸಿನಿಮಾ ಹೆಬ್ಬುಲಿ ಅಭಿಮಾನಿಗಳ ಮನ ಗೆದ್ದಿವೆ. ಈಗ ಅವರ ಮೂರನೇ ಸಿನಿಮಾ ‘ಪೈಲ್ವಾನ್’ ಭರ್ಜರಿ ಸದ್ದು ಮಾಡುತ್ತಿದೆ. ಈ ಮೂಲಕ ತಾವು ಉತ್ತಮ ನಿರ್ದೇಶಕ ಎನ್ನುವುದನ್ನು ಕೃಷ್ಣ ಹಂತ ಹಂತವಾಗಿ ನಿರೂಪಿಸುತ್ತಾ ಬಂದಿದ್ದಾರೆ ಎಂದು ನಿರ್ದೇಶಕರ ಬೆನ್ನು ತಟ್ಟಿದರು. ಇದನ್ನೂ ಓದಿ: ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಬರದಿರಿ: ದರ್ಶನ್
ಸ್ಟಾರ್ ವಾರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಕುಟುಂಬದಲ್ಲಿ ಒಬ್ಬರಾಗಿ ಇರಬೇಕು. ನಾನು ದೊಡ್ಡವನು, ಅವರು ದೊಡ್ಡವರು ಎನ್ನುವುದು ಸರಿಯಲ್ಲ. ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾ ಬಂದಾಗ ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು ಹೊಟ್ಟೆಕಿಚ್ಚು ಪಡಬಾರದು. ಒಬ್ಬರಿಗೆ ಒಬ್ಬರು ಟಾಂಗ್ ಕೊಡುವುದು ಸರಿಯಲ್ಲ. ಹಿರಿಯನಾಗಿ ಒಂದು ಮಾತು ಹೇಳುತ್ತೇನೆ. ಸರಿಯಾಗಿದ್ದರೆ ಸ್ವೀಕರಿಸಿ, ಹಿರಿಯರ ಮಾತಿಗೆ ಬೆಲೆ ಕೊಡಿ ಎಂದರು.
ಸಿನಿಮಾ ಪೈರಸಿ ಮಾಡುವುದು ಉತ್ತಮ ನಡೆಯಲ್ಲ. ಹೀಗೆ ಮಾಡಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ನಿರ್ಮಾಪಕರು ಪ್ರಕರಣ ದಾಖಲಿಸಿ, ತನಿಖೆಗೆ ಒತ್ತಾಯಿಸಬೇಕು ಎಂದು ತಿಳಿಸಿದರು.
ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ನಟಿ ಆಕಾಂಕ್ಷಾ ಸಿಂಗ್ ಅವರನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆಯಾಗುತ್ತಾರೆ. ಆಗ ನಟಿಯ ತಂದೆ ಅವಿನಾಶ್ ಅವರು ತುಂಬಾ ನೋವನ್ನು ವ್ಯಕ್ತಪಡಿಸುತ್ತಾರೆ. ಈ ಸನ್ನಿವೇಶದ ಕುರಿತು ಪ್ರತಿಕ್ರಿಯೆ ನೀಡಿದ ಶಿವಣ್ಣ ಅವರು, ಹೆಣ್ಣು ಮಕ್ಕಳು ಇದ್ದವರಿಗೆ ಆ ನೋವು ಏನು ಅಂತ ತಿಳಿಯುತ್ತದೆ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಣ್ಣ, ತಾಯಿ, ತಂದೆ ಯಾರೇ ಆಗಿದ್ದರೂ ಅವರಿಗೆ ಹೆಣ್ಣು ಮಕ್ಕಳು ಅಂದ್ರೆ ಅತ್ಯಮೂಲ್ಯ ಸಂಬಂಧ. ನಾನು ನಟಿಸಿದ ‘ತವರಿಗೆ ಬಾ ತಂಗಿ’, ‘ಜೋಗಿ’ ಅಂತಹ ಸಿನಿಮಾಗಳಲ್ಲಿ ಹೆಣ್ಣಿನ ಭಾವನೆಗಳಿವೆ. ಇಂತಹ ಸಿನಿಮಾಗಳು ಪ್ರೇಕ್ಷಕರ ಮನ ಗೆಲ್ಲುತ್ತವೆ ಎಂದು ತಿಳಿಸಿದರು.
ನಟನಿಗೆ ವಯಸ್ಸು ಮುಖ್ಯವಲ್ಲ. ಪಾತ್ರಕ್ಕೆ ತಕ್ಕಂತೆ ಬದಲಾಗುವ ಪವರ್ ಇರಬೇಕು. ಇಂತಹ ಬದಲಾವಣೆ ನನ್ನಿಂದ ಆಗಿದೆ ಎಂದು ಹೇಳುವುದು ಸರಿಯಲ್ಲ. ‘ಭಜರಂಗಿ’ ಸಿನಿಮಾದಲ್ಲಿ ಕೊನೆಯ ಸೀನ್‍ನಲ್ಲಿ ಮೈಕಟ್ಟು ತೋರಿಸಿದ್ದೇನೆ. ಅಗತ್ಯವಿರುವ ಸೀನ್‍ಗಳಲ್ಲಿ ಮಾತ್ರ ಮೈಕಟ್ಟು ತೋರಿಸಬೇಕು. ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಅವರು ಕೂಡ ತಮ್ಮ ಸಿನಿಮಾಗೆ ತಕ್ಕಂತೆ ಮೈಕಟ್ಟು ಬೆಳೆಸಿಕೊಳ್ಳಲು ಹಾರ್ಡ್ ವರ್ಕೌಟ್ ಮಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೈಲ್ವಾನ್ ರೀತಿಯ ಚಿತ್ರಕಥೆ ಬಂದರೆ ಖಂಡಿತ ನಟಿಸುತ್ತೇನೆ. ನಾನು ಫಿಟ್ ಆಗಿರಲು ಬಯಸುತ್ತೇನೆ. ನನಗೆ ಶಸ್ತ್ರಚಿಕಿತ್ಸೆ ಆಗಿದ್ದರೂ ವರ್ಕೌಟ್ ಆರಂಭಿಸಿದ ನಾಲ್ಕು ದಿನಕ್ಕೆ ವೇಟ್ ಲಿಫ್ಟ್ ಮಾಡಲು ಆರಂಭಿಸಿದೆ. ಇಂತಹ ಅದ್ಭುತ ಸಿನಿಮಾ ಮಾಡಲು ನಿರ್ದೇಶಕ ಕೃಷ್ಣ ಹೆಚ್ಚು ಶ್ರಮಪಟ್ಟಿದ್ದಾರೆ ಎಂದು ತಿಳಿಸಿದರು.