ಉಡುಪಿ: ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚಿಗುರಿತಾ? ಪಕ್ಕದ ಕೇರಳದ ಕೆಂಪು ನಕ್ಸಲರು ತಮ್ಮ ಕ್ಯಾಂಪನ್ನು ಕರಾವಳಿ, ಮಲೆನಾಡು ಕಡೆ ವಿಸ್ತರಿಸಿದ್ರಾ? ಇಂತಹದೊಂದು ಪ್ರಶ್ನೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಓಡಾಡುತ್ತಿದೆ. ಬೈಂದೂರು ತಾಲೂಕು ಕೊಲ್ಲೂರಿನ ಕಾಡಿನಲ್ಲಿ ಸಿಕ್ಕ ತಾತ್ಕಾಲಿಕ ಗುಡಿಸಲು ಇಷ್ಟೆಲ್ಲಾ ಗಾಸಿಪ್ ಗಳಿಗೆ ಕಾರಣವಾಗಿದೆ.
ಕೊಲ್ಲೂರು ಅಭಯಾರಣ್ಯದ ಗುಡಿಸಲಿನಲ್ಲಿ ಸಿಕ್ಕ ಅಕ್ಕಿ, ಎಣ್ಣೆ, ಛತ್ರಿ, ವಿಭೂತಿ, ಬಟ್ಟೆಗಳು ಪೊಲೀಸ್ ಇಲಾಖೆ, ಎಎನ್‍ಎಫ್, ಅರಣ್ಯ ಇಲಾಖೆಯ ನಿದ್ದೆಗೆಡಿಸಿತ್ತು. ದಿನಪೂರ್ತಿ ತಪಾಸಣೆ ಮಾಡಿದ ಮೂರೂ ಇಲಾಖೆಯ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇದೀಗ ನಕ್ಸಲ್ ಚಟುವಟಿಕೆಯನ್ನು ಅಲ್ಲಗಳೆದಿದ್ದಾರೆ.
ಚಾರಣಿಗರೋ, ಧಾರ್ಮಿಕ ಪ್ರವಾಸದ ಸಂದರ್ಭ ಭಕ್ತರು ತಾತ್ಕಾಲಿಕ ಟೆಂಟ್ ಮಾಡಿರಬಹುದು ಎಂದು ಪೊಲೀಸ್ ತಪಾಸಣೆಯಲ್ಲಿ ತಿಳಿದುಬಂದಿದೆ. ಪಕ್ಕದಲ್ಲೆ ಧ್ಯಾನಕೇಂದ್ರವಿದ್ದು ಭಕ್ತರು ಧ್ಯಾನ ಮಾಡಲು ತಾತ್ಕಾಲಿಕ ಟೆಂಟ್ ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ನಡುವೆ ಹೆಬ್ರಿ ತಾಲೂಕಿನ ನಾಡ್ಪಾಲ್ ಲೊಕೇಶನ್ ನಿಂದ ಕರಾಚಿಗೆ ಫೋನ್ ಕರೆಯೊಂದು ಹೋಗಿದೆ. ಹೆಬ್ರಿಗೆ ಮತ್ತು ಕೊಲ್ಲೂರಿಗೆ ಎನ್‍ಐಎ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ನಕ್ಸಲ್ ಸುದ್ದಿ ಮತ್ತು ಭಯೋತ್ಪಾದಕ ಚಲನವಲನದ ವರದಿ ಒಂದಕ್ಕೊಂದು ಲಿಂಕ್ ಆಗಿ, ಜನರಲ್ಲಿ ಆತಂಕ ಮೂಡಿಸಿತ್ತು. ಇದಕ್ಕೂ ಸ್ಪಷ್ಟನೆ ನೀಡಿರುವ ಎಸ್‍ಪಿ ನಿಶಾ ಜೇಮ್ಸ್ ಎನ್‍ಐಎ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿಲ್ಲ, ಎಲ್ಲೂ ವಿಚಾರಣೆ ನಡೆಸಿಲ್ಲ. ನಕ್ಸಲ್ ಚಲನವಲನ ಕೂಡಾ ಜಿಲ್ಲೆಯಲ್ಲಿ ಇಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಎಸ್‍ಪಿ ನಿಶಾ ಜೇಮ್ಸ್ ಮಾತನಾಡಿ, ದಿನಾಂಕ 16ರಂದು ಅರಣ್ಯಾಧಿಕಾರಿಗಳಿಂದ ನಮಗೆ ಮಾಹಿತಿ ಬಂದಿತ್ತು. ನಮ್ಮ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶ ಅದು ಜಂಟಿ ಕಾರ್ಯಾಚರಣೆ ಮಾಡಿದಾಗ ವಿಭೂತಿ ಕುಂಕುಮ ಸಿಕ್ಕಿದೆ. ಧ್ಯಾನಕ್ಕೆ ಬರುವವರು ಟೆಂಟ್ ಹಾಕಿರುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ನಕ್ಸಲ್ ಚಟುವಟಿಕೆಯಂತೆ ಕಂಡುಬರುವುದಿಲ್ಲ. ಜಿಲ್ಲೆಗೆ ಎಎನ್‍ಐ ಅಧಿಕಾರಿಗಳು ಭೇಟಿಕೊಟ್ಟಿಲ್ಲ. ಎಎನ್‍ಐ ಅಧಿಕಾರಿಗಳು ಜಿಲ್ಲೆಗೆ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡದೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದರು.