ಹಾವೇರಿಯಲ್ಲಿ ಇನ್ನೂ ವಿತರಣೆಯಾಗಿಲ್ಲ ಮಕ್ಕಳಿಗೆ ಸಮವಸ್ತ್ರ, ಪುಸ್ತಕ

Public TV
1 Min Read
uniform 4

ಹಾವೇರಿ: ಶೈಕ್ಷಣಿಕ ವರ್ಷದ ಆರಂಭಕ್ಕೆ ಸರಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂ, ಸಾಕ್ಸ್ ವಿತರಣೆ ಮಾಡಬೇಕು. ಆದರೆ ಇನ್ನೇನು ಕೆಲವೇ ದಿನಗಳು ಕಳೆದರೆ ಅರ್ಧ ಶೈಕ್ಷಣಿಕ ವರ್ಷವೇ ಮುಗಿಯುತ್ತಾ ಬಂದರೂ ಹಾವೇರಿ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಆಗಿಲ್ಲ. ಕೆಲವು ಕಡೆಗಳಲ್ಲಿ ಪಠ್ಯ ಪುಸ್ತಕ, ಶೂ, ಸಾಕ್ಸ್ ಗಳೂ ಸಿಕ್ಕಿಲ್ಲ.

ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್ ಸಿಗದೆ, ಮಕ್ಕಳು ಕಳೆದ ವರ್ಷ ನೀಡಿರುವ ಹರಿದಿರುವ ಬಟ್ಟೆಗಳನ್ನೇ ಹೊಲಿದು ಹಾಕಿಕೊಂಡು ಶಾಲೆಗೆ ಬರುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಶಾಲೆ ಆರಂಭದಿಂದಲೂ ಸಮವಸ್ತ್ರ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾರೆ. ಇದನ್ನು ಓದಿ: ಬಾಲಕನ ಕೋರ್ಟ್ ಹೋರಾಟದಿಂದಾಗಿ ಮಕ್ಕಳಿಗೆ ಸಿಗುವಂತಾಯ್ತು ಎರಡು ಜೊತೆ ಸಮವಸ್ತ್ರ

uniform 2

ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷ ಅರ್ಧ ಕಳೆಯುತ್ತ ಬಂದರೂ ಈವರೆಗೆ ಜಿಲ್ಲೆಯ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಸೇರಿದಂತೆ ಯಾವುದೇ ಸರಕಾರಿ ಸೌಲಭ್ಯಗಳು ದೊರೆತಿಲ್ಲ.

ಕಳೆದ ಒಂದು ವಾರದಲ್ಲಿ ಕೆಲವು ಸರ್ಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಸಮವಸ್ತ್ರ, ಪಠ್ಯಪುಸ್ತಕ ಸೇರಿದಂತೆ ಕೆಲವು ಸಲಕರಣೆಗಳು ವಿತರಣೆ ಆಗಿವೆ. ಮತ್ತೆ ಕೆಲವು ಕಡೆಗಳಲ್ಲಿ ಸಮವಸ್ತ್ರ ಶಾಲೆಗಳಿಗೆ ತಲುಪಿದರೂ ಇನ್ನೂ ಮಕ್ಕಳ ಕೈಸೇರಿಲ್ಲ. ಸಮವಸ್ತ್ರ ವಿತರಣೆಗೆ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಸಕರು ಹಾಗೂ ಅಧಿಕಾರಿಗಳಿಗೆ ಸಮಯ ಸಿಗುತ್ತಿಲ್ಲ. ಅವರನ್ನೇ ಕರೆಸಿ ಸಮವಸ್ತ್ರ ವಿತರಿಸಬೇಕು ಎಂದು ಕೆಲವು ಶಾಲೆಗಳ ನಿಲುವಿನಿಂದಾಗಿ ಇನ್ನೂ ಸಮವಸ್ತ್ರಗಳನ್ನು ವಿತರಿಸಿಲ್ಲ.

uniform 3

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕೊರತೆಗೆ ಸರ್ಕಾರದ ನಿರ್ಲಕ್ಷವೂ ಪ್ರಮುಖ ಕಾರಣವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಪದೆ ಪದೇ ಸರಕಾರಿ ಶಾಲೆಗಳ ಉಳಿವು, ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಮಯಕ್ಕೆ ಸರಿಯಾಗಿ ಸರಕಾರಿ ಶಾಲೆ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದು ಪೋಷಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *