ಮಡಿಕೇರಿ: ಟ್ರೆಕ್ಕಿಂಗ್‍ಗೆ ಬಂದ 12 ಯುವಕರ ತಂಡದಲ್ಲಿ ಓರ್ವ ಯುವಕ ನಾಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದಲ್ಲಿ ನಡೆದಿದೆ.
ಬೆಂಗಳೂರಿನಿಂದ ಬಂದಿದ್ದ ಯುವಕರ ತಂಡ ಸುಬ್ರಮಣ್ಯದ ಗಿರಿಗದ್ದೆಯಿಂದ ಕುಮಾರಪರ್ವತದ ಮೂಲಕ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಭಾನುವಾರ ತೆರಳಿತ್ತು. 12 ಮಂದಿ ಯುವಕರ ತಂಡದ ಪೈಕಿ ಬೆಂಗಳೂರಿನ ಯುವಕ ಸಂತೋಷ್ (25) ಎಂಬಾತ ಅರಣ್ಯದೊಳಗೆ ದಾರಿ ತಪ್ಪಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪುಷ್ಪಗಿರಿಯ ತುತ್ತ ತುದಿಯಲ್ಲಿರುವ ಬ್ಯೂಟಿ ಸ್ಪಾಟ್‍ಗೆ ತೆರಳಿದ ಯುವಕರ ತಂಡ ಸುಬ್ರಮಣ್ಯಕ್ಕೆ ವಾಪಸ್ ಹಿಂತಿರುಗುವಾಗ ಗಿರಿಗದ್ದೆ ಚೆಕ್‍ಪೋಸ್ಟ್ ನ ಮೂಲಕ ದಾಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಆದರೆ ತದ ನಂತರ ಸುಬ್ರಮಣ್ಯ ಮೀಸಲು ಅರಣ್ಯದಿಂದ ಯುವಕ ಸಂತೋಷ್ ನಾಪತ್ತೆಯಾಗಿದ್ದಾನೆ. ಈ ಕುರಿತು ಮಾಹಿತಿ ಪಡೆದ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಭಾನುವಾರ ಸಂಜೆಯಿಂದ ತೀವ್ರ ಶೋಧಕಾರ್ಯ ನಡೆಸಿದ್ದಾರೆ. ಆದರೆ ಈವರೆಗೂ ಸಂತೋಷ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.