ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

Public TV
4 Min Read
MYSORE PAK

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ಪಾಕ್ ಮೂಲ ಯಾರದ್ದು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ಚರ್ಚೆ ಆರಂಭವಾಗಿದೆ. ಹೆಸರಿನಲ್ಲಿ ಮೈಸೂರು ಹೊಂದಿದ್ದರಿಂದ ಈ ಸಿಹಿ ಪದಾರ್ಥ ನಮ್ಮದು ಎಂಬುವುದು ಕರ್ನಾಟಕದ ವಾದ. ಕರ್ನಾಟಕ ಮೂಲದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆ, ಕಥೆಗಳು ನಮ್ಮ ಮುಂದಿವೆ. ಇತ್ತ ನೆರೆಯ ರಾಜ್ಯ ತಮಿಳುನಾಡು ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕ(ಜಿಐ) ನಮ್ಮದು ಎಂದು ತಮ್ಮದೇ ಕಾರಣಗಳಿಂದ ವಾದಿಸುತ್ತಾ ಬಂದಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಮೈಸೂರು ಪಾಕ್ ಹಿಡಿದುಕೊಂಡಿರುವ ಒಂದು ಫೋಟೋವನ್ನು ತಮಿಳುನಾಡಿನ ಲೇಖಕ ಆನಂದ್ ರಂಗನಾಥನ್ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ಏಕಸದಸ್ಯ ಸಮಿತಿಯ ಪರವಾಗಿ ತಮಿಳುನಾಡಿಗೆ ಮೈಸೂರು ಪಾಕ್ ತಿಂಡಿಯ ಭೌಗೋಳಿಕ ಸೂಚಂಕ್ಯವನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ವ್ಯಂಗ್ಯವಾಗಿ ಈ ಟ್ವೀಟ್ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈಗ ಮೈಸೂರು ಪಾಕ್ ಮೂಲ ಯಾರದ್ದು ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ.

mysuru pak

ಮೈಸೂರು ಪಾಕ್ ಹೆಸರೇ ಸೂಚಿಸುವಂತೆ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ವಿಶೇಷ ಪಾಕ ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಟಿಪ್ಪಣಿ ಆಧರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳಿಗರ ವಾದವಾಗಿದೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

ಕನ್ನಡಿಗರ ವಾದ ಏನು?
ಮೈಸೂರು ಪಾಕ್ ಮೊದಲು ತಯಾರಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರಾದ ಕಕಸುರ ಮಾದಪ್ಪ ಎಂಬವರು ಈ ಸಿಹಿಯನ್ನು ತಯಾರಿಸಿದ್ದರು. ಮೊದಲು ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು ‘ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ.

MYSORE PAK

ಮೆಕಾಲೆ ಹೇಳುವುದೇನು?
ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಈಗ ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

mysore pak tweet

ಜಿಐ ಟ್ಯಾಗ್ ಲಾಭವೇನು?
ಭೌಗೋಳಿಕ ಸೂಚ್ಯಂಕ ಒಂದು ನಿರ್ದಿಷ್ಟ ಪದಾರ್ಥ ಅಥವಾ ಊರನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರ ನೀಡುವ ಭೌಗೋಳಿಕ ಸೂಚ್ಯಂಕ ಪದಾರ್ಥ ಅಥವಾ ಸ್ಥಳದ ಮಹತ್ವವನ್ನು ವಿವರಿಸುತ್ತದೆ. ಜಿಐ ಟ್ಯಾಗ್ ಪಡೆದ ರಾಜ್ಯ ಸರ್ಕಾರ ಪದಾರ್ಥದ ಮೇಲಿನ ಸಂಪೂರ್ಣ ಹಕ್ಕು ಹೊಂದಿರುತ್ತದೆ. ಸರ್ಕಾರ ಪದಾರ್ಥದ ಬೆಲೆ ನಿಗದಿ ಮಾಡುವ ಹಕ್ಕು ಸಹ ಹೊಂದಿರುತ್ತದೆ. ಐಜಿ ಟ್ಯಾಗ್ ಅವಧಿ 10 ವರ್ಷ ಇರುತ್ತದೆ. ಸರ್ಕಾರಗಳು ಪ್ರತಿ 10 ವರ್ಷಕ್ಕೊಮ್ಮೆ ಐಟಿ ಟ್ಯಾಗ್ ನ್ನು ನವೀಕರಣಗೊಳಿಸಿಕೊಳ್ಳಬೇಕು.

mysore pak

ಕರ್ನಾಟಕದ ಧಾರವಾಡ ಪೇಡಕ್ಕೆ ಐಜಿ ಟ್ಯಾಗ್ ಸಿಕ್ಕಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.

ಯಾವುದೇ ಆಹಾರ ಪದಾರ್ಥ, ತರಕಾರಿಗಳಿಗೆ ಭೌಗೋಳಿಕ ಸೂಚ್ಯಂಕ ಪಡೆಯಬೇಕಾದರೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಾಗುತ್ತದೆ.

ಕರ್ನಾಟಕದಲ್ಲಿ ಯಾವುದಕ್ಕೆ ಜಿಐ ಸಿಕ್ಕಿದೆ?
ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದ ಎಲೆ, ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಮೊಳಕಾಲ್ಮುರು ಸೀರೆಗಳು, ಮಲಬಾರ್ ಅರಾಬಿಕಾ ಕಾಫಿ, ಮಲಬಾರ್ ರೋಬಸ್ಟಾ ಕಾಫಿ, ಕೊಡಗು ಹಸಿರು ಏಲಕ್ಕಿ, ಧಾರವಾಡ ಪೇಡಾ, ದೇವನಹಳ್ಳಿ ಚಕ್ಕೊತ್ತಾ, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆಹಣ್ಣು, ಚನ್ನಪಟ್ಟಣದ ಗೊಂಬೆ, ಇಳಕಲ್ ಸೀರೆಗಳು ಸೇರಿದಂತೆ ರಾಜ್ಯದ 40 ಉತ್ಪನ್ನಗಳಿಗೆ ಜಿಐ ಮಾನ್ಯತೆ ಸಿಕ್ಕಿದೆ.

mysore pak

ಅತಿ ಹೆಚ್ಚು ಜಿಐ ಮಾನ್ಯತೆ ಪಡೆದ ರಾಜ್ಯಗಳು?
ರಾಜ್ಯಗಳ ಪ್ರಸ್ತಾಪವನ್ನು ಒಪ್ಪಿ ಕೇಂದ್ರ ಸರ್ಕಾರ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಮಾನ್ಯತೆಯನ್ನು ನೀಡುತ್ತದೆ. ಪಟ್ಟಿಯಲ್ಲಿ 40 ಉತ್ಪನ್ನಗಳಿಗೆ ಮಾನ್ಯತೆ ಪಡೆಯುವ ಮೂಲಕ ಅತಿ ಹೆಚ್ಚು ಜಿಐ ಸಂಪಾದಿಸಿದ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ. ರಾಜ್ಯಕ್ಕೆ ಸಿಕ್ಕಿರುವ 40ರಲ್ಲಿ 13 ಮೈಸೂರಿನಿಂದ ಬಂದಿರುವ ಉತ್ಪನಗಳು ಎನ್ನುವುದು ವಿಶೇಷ.

ಕರ್ನಾಟಕದ ಬಳಿಕ ಮಹಾರಾಷ್ಟ್ರ(30), ಕೇರಳ(27), ಉತ್ತರ ಪ್ರದೇಶ(24), ಆಂಧ್ರಪ್ರದೇಶ(18), ಪಶ್ಚಿಮ ಬಂಗಾಳ(15), ಒಡಿಶಾ(14), ರಾಜಸ್ಥಾನ(14), ಗುಜರಾತ್(13), ಬಿಹಾರ(11), ತೆಲಂಗಾಣ(11), ಅಸ್ಸಾಂ(8), ಮಧ್ಯಪ್ರದೇಶ(8), ಜಮ್ಮು ಕಾಶ್ಮೀರ(8) ರಾಜ್ಯಗಳ ಉತ್ಪನ್ನಗಳಿಗೆ ಜಿಐ ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *