ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!

Public TV
3 Min Read
dvg traffic fine 1

– ಪೊಲೀಸರಿಗೆ ಇನ್ನೂ ಕೂಡ ಆದೇಶವೇ ತಲುಪಿಲ್ಲವಂತೆ

ಬೆಂಗಳೂರು: ಸರ್ಕಾರ ಸೂಚನೆ ಕೊಟ್ಟರೂ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರಿಗೆ ಹೊಸ ದಂಡವನ್ನೇ ಪ್ರಯೋಗಿಸುತ್ತಿದ್ದಾರೆ.

ದುಬಾರಿ ದಂಡದ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಹೊಸ ಟ್ರಾಫಿಕ್ ದಂಡದ ಮೊತ್ತವನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ದಂಡವನ್ನು ತೆಗೆದುಕೊಳ್ಳಬೇಕು ಎಂದು ಟ್ರಾಫಿಕ್ ಪೊಲೀಸರಿಗೆ ಮೌಖಿಕ ಆದೇಶ ನೀಡಿದೆ. ಆದರೆ ಈ ಆದೇಶವು ಪೊಲೀಸರಿಗೆ ಇನ್ನೂ ಕೂಡ ತಲುಪಿಲ್ಲವಂತೆ. ಅಷ್ಟೇ ಅಲ್ಲದೆ ದಂಡದ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಪೊಲೀಸರು ಹೊಸ ದಂಡವನ್ನೇ ಪಡೆಯುತ್ತಿದ್ದಾರೆ.

ಸರ್ಕಾರ ಹಳೆಯ ದಂಡ ತೆಗೆದುಕೊಳ್ಳುವುದಕ್ಕೆ ಮೌಖಿಕ ಆದೇಶ ಕೊಡುತ್ತದೆ. ಆದರೆ ದಂಡ ಹಾಕುವ ಮಷೀನ್‍ಗಳಲ್ಲಿ ದಂಡದ ಮೊತ್ತ ಎಲ್ಲಾ ಅಪಡೆಟ್ ಆಗಿದೆ. ಹೆಲ್ಮೆಟ್ ಫೈನ್ ಅಂತ ಹಾಕಿದರೆ 1,000 ರೂ. ಅಂತ ಬರುತ್ತದೆ. ಹಳೆಯ ದಂಡ ಕೇವಲ 100 ರೂ. ಮಾತ್ರ. ಪೇಪರ್ ನಲ್ಲಿ ಬರೆದು ದಂಡ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಅಧಿಸೂಚನೆ ಸಿಗದೆ ಮಷೀನ್‍ಗಳನ್ನು ಅಪ್‍ಡೇಟ್ ಮಾಡುವುದಕ್ಕೆ ಸಾಧ್ಯವಿಲ್ಲ. ಹಳೆಯ ದಂಡಕ್ಕೆ ಮಷೀನ್‍ಗಳನ್ನು ಅಪ್‍ಡೇಟ್ ಮಾಡುವುದಕ್ಕೆ ಮೂರು ದಿನಗಳಾದರೂ ಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು, ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರಿಂದ ಹೊಸ ದಂಡವನ್ನು ಪಡೆಯಬೇಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಅಷ್ಟೇ ಅಲ್ಲದೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು ಪಡೆಯಬೇಕು ತಿಳಿಸಲಾಗಿದೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ನಡೆಸಿ ದಂಡ ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ ಬೇರೆ ಬೇರೆ ರಾಜ್ಯಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಗುಜರಾತ್‍ನಲ್ಲಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ಅದನ್ನು ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

ಬೆಂಗಳೂರಿನಲ್ಲಿ ಟ್ರಾಫಿಕ್ ದಂಡವನ್ನ ಕಡಿಮೆ ಮಾಡುವ ಪ್ರಸ್ತಾವನೆ ಬಂದಿಲ್ಲ. ಸರ್ಕಾರದ ಆದೇಶ ಬಂದ ಮೇಲೆ ಆದೇಶದಲ್ಲಿ ಏನಿರುತ್ತೆ ನೋಡಿಕೊಂಡು ಟ್ರಾಫಿಕ್ ಪೈನ್‍ನಲ್ಲಿ ಬದಲಾವಣೆ ಮಾಡುತ್ತೇವೆ. ಆದೇಶ ಬರುವವರೆಗೂ ದಂಡದಲ್ಲಿ ಯಾವುದೇ ಬದಲಾವಣೆ ಸದ್ಯಕ್ಕಿಲ್ಲ. ಸಾರಿಗೆ ಸಚಿವರು ಹೇಳಿಕೆ ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಮಾಣದಲ್ಲಿ ಆಗುವ ಸಣ್ಣ ಪುಟ್ಟ ನಿಯಮ ಉಲ್ಲಂಘಟನೆಗೆ ನೋಡಿ ದಂಡ ಪ್ರಯೋಗ ಮಾಡುವಂತೆ ಹೇಳಿದ್ದಾರೆ. ಅದನ್ನು ಮಾಡಲು ಟ್ರಾಫಿಕ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

IPS Bhaskar Rao 1

ಶಿಸ್ತು ಕಾಪಾಡಲು ದಂಡ ಇರುತ್ತದೆಯೇ ಹೊರತು ನಾವು ಮುಂದೆ ತಪ್ಪು ಮಾಡುತ್ತೇವೆ. ನಮಗೆ ದಂಡ ಕಡಿಮೆ ಮಾಡಿ ಅಂತ ಹೇಳುವುದಕ್ಕಲ್ಲ. ಈಗ ಇರುವ ದಂಡವು ಸರಿಯಾಗಿದೆ. ರಸ್ತೆ ಅಪಘಾತದಿಂದಾಗಿ ಪ್ರತಿ ವರ್ಷ ದೇಶದಲ್ಲಿ 1.5 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ದಿನ ಸುಮಾರು 35 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

ಹಳೆಯ ದಂಡ:
ಹಳೆಯ ದಂಡದಲ್ಲಿ ರಸ್ತೆ ನಿಯಮ ಉಲ್ಲಂಘನೆಗೆ 100 ರೂ., ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಗೆ 100 ರೂ, ಪರವಾನಿಗೆ ಇಲ್ಲದೆ ವಾಹನ ಚಾಲನೆಗೆ 1,000 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ 500 ರೂ. ಹಾಗೂ ಅತಿವೇಗಕ್ಕೆ 400 ರೂ. ವಿಧಿಸಲಾಗುತ್ತಿತ್ತು. ಜೊತೆಗೆ ಮದ್ಯ ಸೇವಿಸಿ ವಾಹನ ಚಾಲನೆಗೆ 2,500 ರೂ., ವೇಗ ಮತ್ತು ರೇಸಿಂಗ್‍ಗೆ 500 ರೂ., ಸೀಟ್ ಬೆಲ್ಟ್ 100 ರೂ. ಹಾಗೂ ಇನ್ಸೂರೆನ್ಸ್ ಇಲ್ಲದಿದ್ದರೆ 1000 ರೂ. ದಂಡದ ಮೊತ್ತವಿತ್ತು.

Share This Article
Leave a Comment

Leave a Reply

Your email address will not be published. Required fields are marked *