ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

Public TV
3 Min Read
bullet train 2

ಅಹ್ಮದಾಬಾದ್: ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಇದೀಗ ಹೈ ಸ್ಪೀಡ್ ರೈಲು ಪ್ರಯಾಣದ ಅಂದಾಜು ದರವನ್ನೂ ಸಹ ಪ್ರಕಟಿಸಲಾಗಿದೆ.

ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸಲಿರುವ ಹೈ ಸ್ಪೀಡ್ ರೈಲಿನ ದರ ಅಂದಾಜು 3 ಸಾವಿರ ರೂ. ಇರಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೋರೇಷನ್ ಲಿ.(ಎನ್‍ಎಚ್‍ಎಸ್‍ಆರ್‍ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಈಗಾಗಲೇ 622 ಹೆಕ್ಟೇರ್ (ಶೇ.45ರಷ್ಟು)ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಉಳಿದ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬುಲೆಟ್ ರೈಲು ಯೋಜನೆಗೆ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಇದರಲ್ಲಿ ಖಾಸಗಿ, ಸರ್ಕಾರಿ, ಅರಣ್ಯ ಮತ್ತು ರೈಲ್ವೇ ಭೂಮಿ ಒಳಗೊಂಡಿದೆ. ಈವರೆಗೆ 622 ಹೆಕ್ಟೇರ್(ಶೇ.45) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಡಿಸೆಂಬರ್ 2023ರ ಗಡುವು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

bullet train 8

ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿ ದಿನ ಬುಲೆಟ್ ರೈಲು 70 ಟ್ರಿಪ್ ಸಂಚರಿಸಲಿದ್ದು, ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕಾರ್ಯನಿರ್ವಹಿಸಲಿದೆ. ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಟೆಂಡರ್ ನೀಡಲಾಗಿದೆ. ಮಾರ್ಚ್ 2020ರೊಳಗೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಈ ಪ್ಯಾಕೇಜ್‍ಗಳಲ್ಲಿ ವಾಪಿ ಮತ್ತು ವಡೋದರಾ ನಡುವೆ 237 ಕಿ.ಮೀ. ಸೇತುವೆ ನಿರ್ಮಾಣ ಹಾಗೂ ವಡೋದರಾ ಮತ್ತು ಅಹ್ಮದಾಬಾದ್ ನಡುವೆ 87ಕಿ.ಮೀ. ಇನ್ನೊಂದು ಪ್ಯಾಕೇಜ್ ಗುರುತಿಸಲಾಗಿದೆ. ಈ ಯೋಜನೆಯನ್ನು ಒಟ್ಟು 27 ಪ್ಯಾಕೇಜ್‍ಗಳಾಗಿ ವಿಂಗಡಿಸಿದ್ದು, ಮಹಾರಾಷ್ಟ್ರದಲ್ಲಿ ಸಮುದ್ರದೊಳಗಿನ ಸುರಂಗ ಮಾರ್ಗ ಸೇರಿದಂತೆ ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಈಗಾಗಲೇ ಟೆಂಡರ್ ನೀಡಿದ್ದೇವೆ ಎಂದು ಖರೆ ವಿವರಿಸಿದರು.

ಪ್ರಸ್ತುತ ಇಡೀ ಯೋಜನೆಯ ಅಂದಾಜು ವೆಚ್ಚ 1.08 ಲಕ್ಷ ಕೋಟಿ ರೂ.ಗಳಾಗಿದೆ. ಡಿಸೆಂಬರ್ 2022ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಭೂಸ್ವಾಧಿನದ ಕುರಿತು ಕೆಲವು ರೈತರಲ್ಲಿ ಅಸಮಾಧಾನ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

modi japan bullet train 2

ಗುಜರಾತ್‍ನಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಿದ್ದ ಸುಮಾರು 5,300 ಖಾಸಗಿ ಪ್ಲಾಟ್‍ಗಳಲ್ಲಿ ಈಗಾಗಲೇ 2,600 ಪ್ಲಾಟ್‍ಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಗುಜರಾತ್‍ನ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ, 4,000 ದೊಡ್ಡ ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ನಗರದ ಪ್ರಸ್ತುತ ರೈಲ್ವೆ ನಿಲ್ದಾಣಗಳಲ್ಲೇ ಅಹ್ಮದಾಬಾದ್‍ನ ಹೈ ಸ್ಪೀಡ್ ರೈಲ್ವೆ ನಿಲ್ದಾಣದ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿವೆ. ಈಗಿರುವ ರೈಲ್ವೇ ಮಾರ್ಗಗಳ ಮೇಲೆಯೇ ಬುಲೆಟ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ರೈಲು ಒಟ್ಟು 508 ಕಿ.ಮೀ. ಸಂಚರಿಸಲಿದ್ದು, 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದರೆ ರೈತರು ಈ ಯೋಜನೆ ವಿರುದ್ಧ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೆಲ ಸಮಯ ಅಡ್ಡಿಯಾಗಿತ್ತು.

modi japan bullet train 4

ಮುಂಬೈ ಅಹ್ಮದಾಬಾದ್ ಮಧ್ಯೆ 508.5 ಕಿ.ಮೀ ಅಂತರವಿದ್ದು ಗಂಟೆಗೆ 320 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

modi japan bullet train 5

Share This Article
Leave a Comment

Leave a Reply

Your email address will not be published. Required fields are marked *