ಲಕ್ನೋ: ಅಪ್ರಾಪ್ತೆಯೊಬ್ಬಳು ತನ್ನ ಇಡೀ ಕುಟುಂಬಸ್ಥರ ಊಟದಲ್ಲಿ ವಿಷ ಹಾಕಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಮೋರದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಕುಟುಂಬದ ಸದಸ್ಯರು ಮಾಡಿದ ಊಟದಲ್ಲಿ ವಿಷದ ಪ್ರಮಾಣ ಕಡಿಮೆ ಇತ್ತು. ಹಾಗಾಗಿ ಅವರು ಪ್ರಜ್ಞೆ ತಪ್ಪಿದ್ದರು. ಸದ್ಯ ಕುಟುಂಬಸ್ಥರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪ್ರಾಪ್ತೆಯನ್ನು ಹುಡುಕುತ್ತಿದ್ದಾರೆ.
ಮಂಗಳವಾರ ರಾತ್ರಿ ಅಪ್ರಾಪ್ತೆ ತನ್ನ ಮನೆಯಲ್ಲಿ ತಯಾರಿಸಿದ್ದ ಅಡುಗೆಯಲ್ಲಿ ವಿಷದ ಪದಾರ್ಥವನ್ನು ಮಿಶ್ರಣ ಮಾಡಿದ್ದಾಳೆ. ಈ ಊಟವನ್ನು ಮಾಡಿದ ಅಪ್ರಾಪ್ತೆಯ ತಾಯಿ, ಇಬ್ಬರು ಸಹೋದರಿಯರು, ಇಬ್ಬರು ಸಹೋದರರು, ಅತ್ತಿಗೆ ಹಾಗೂ ಸೋದರಳಿಯ ಪ್ರಜ್ಞೆ ತಪ್ಪಿದ್ದಾರೆ. ಕುಟುಂಬಸ್ಥರು ಪ್ರಜ್ಞೆ ತಪ್ಪುತ್ತಿದ್ದಂತೆ ಬಾಲಕಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಆತನ ಜೊತೆ ಎಸ್ಕೇಪ್ ಆಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಓಡಿಹೋದ ಯುವಕ ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದನು. ಯುವಕ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಕೇಳಿ ಬರುತ್ತಿದೆ. ಇವರಿಬ್ಬರ ಸಂಬಂಧಕ್ಕೆ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಅಲ್ಲದೆ ಅಪ್ರಾಪ್ತೆಯ ಕುಟುಂಬಸ್ಥರು ಯುವಕನನ್ನು ಅತ್ಯಾಚಾರದ ಪ್ರಕರಣದಲ್ಲಿ ಸಿಲುಕಿಸಿದ್ದರು. ಯುವಕ ಜಾಮೀನಿನ ಮೇಲೆ ಹೊರ ಬಂದ ನಂತರ ಬಾಲಕಿಯನ್ನು ಸಂಪರ್ಕಿಸಿದ್ದಾನೆ. ಬಳಿಕ ಇಬ್ಬರು ಪ್ಲಾನ್ ಮಾಡಿ ಓಡಿ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಾಲಕಿ ಕುಟುಂಬದ ಇಬ್ಬರು ಸದಸ್ಯರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮಹಿಳೆ ಹಾಗೂ ಅವರ ಮಗು ಆಸ್ಪತ್ರೆಯಲ್ಲಿ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್‍ಪಿ ಉದಯ್ ಶಂಕರ್ ಸಿಂಗ್ ತಿಳಿಸಿದ್ದಾರೆ. ಬಳಿಕ ಮಾತನಾಡಿದ ಎಸ್‍ಎಚ್‍ಒ ಮನೋಜ್ ಕುಮಾರ್ ಅವರು, ಬಾಲಕಿ ಅಪ್ರಾಪ್ತೆ ಆಗಿರುವ ಕಾರಣ ಆರೋಪಿ ಅರವಿಂದ್ ಕುಮಾರ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.