ಕೋಲಾರ: ಇಲಾಖೆಯಲ್ಲಿನ ಹೊಸ ಯೋಜನೆಯ ಚಿಂತನೆ ಎಲ್ಲಿಗೆ ಬಂತು ಎಂದು ಕೇಳಿದ್ದಕ್ಕೆ ಅಬಕಾರಿ ಸಚಿವ ಎಚ್.ನಾಗೇಶ್ ಕೆಂಡಾಮಂಡಲರಾಗಿದ್ದು, ನನ್ನ ಟೈಂ ವೇಸ್ಟ್ ಮಾಡಬೇಡಿ, ಬೇರೆ ಏನಾದರೂ ಕೇಳಿ ಎಂದು ಮಾಧ್ಯಮದವರ ಮೇಲೆ ಕೋಪಗೊಂಡಿದ್ದಾರೆ.
ಕೋಲಾರದ ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಂದಿರುವುದು ಬೇರೆ ಕೆಲಸಕ್ಕಾಗಿ. ಅದನ್ನು ಬಿಟ್ಟು ಬೇರೆ ಏನನ್ನೂ ಕೇಳಬೇಡಿ. ಬೇರೆ ವಿಚಾರಗಳನ್ನು ಕೇಳಿ ನನ್ನ ಟೈಂ ವೇಸ್ಟ್ ಮಾಡಬೇಡಿ. ಹೊಸ ಯೋಜನೆಗಳ ಜಾರಿಯಲ್ಲಿ ನನ್ನೊಬ್ಬನ ತೀರ್ಮಾನವೇ ಅಂತಿಮವಲ್ಲ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ನಂತರ ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಮನೆ ಮನೆಗೆ ಮದ್ಯ ತಲುಪಿಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿಕೆ ನೀಡುವ ಮೂಲಕ ಸಚಿವ ನಾಗೇಶ್ ಭಾರೀ ಆಕ್ರೋಶಕ್ಕೆ ಕಾರಣರಾಗಿದ್ದರು.
ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ವಿರುದ್ಧ ಕರೆಂಟ್ ಕಳ್ಳತನದ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದ್ದರೆ ದಂಡ ಕಟ್ಟಲೇ ಬೇಕು. ಬೆಸ್ಕಾಂನಲ್ಲಿಯೂ ಹಲವು ನೀತಿ ನಿಯಮಗಳಿವೆ. ವಿದ್ಯುತ್ ಕಳ್ಳತನ ಮಾಡಿದ್ದರೆ ದಂಡ ಹಾಕುತ್ತಾರೆ. ಅದನ್ನು ಕಟ್ಟಲೇ ಬೇಕು ಎಂದರು.
ಹೊಸ ಮೋಟಾರ್ ವಾಹನ ಕಾಯ್ದೆಯಿಂದ ದಂಡ ಹೆಚ್ಚಳವಾಗಿದೆ. ಇದರಿಂದ ಸವಾರರಿಗೆ ಹೊರೆಯಾಗಿದೆ. ಬೇರೆ ರಾಜ್ಯದಂತೆ ಸಿಎಂ ಹಾಗೂ ಸಾರಿಗೆ ಸಚಿವರು ಸೇರಿ ದಂಡ ಕಡಿಮೆ ಮಾಡುವ ಕುರಿತು ನಿರ್ಧಾರಕ್ಕೆ ಬರಬೇಕು ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ವಹಿಸಿರುವುದನ್ನು ಖಂಡಿಸಿ ಒಕ್ಕಲಿಗ ಸಮುದಾಯದವರು ನಡೆಸಿದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದು ಅವರ ಸಮುದಾಯಕ್ಕೆ ಸಂಬಂಧಪಟ್ಟ ವಿಚಾರ, ಇದರಲ್ಲಿ ನಾವು ಹಸ್ತಕ್ಷೇಪ ಮಾಡಬಾರದು. ಕಾನೂನು ಅಡಿಯಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಕುರಿತು ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.