ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶವಾಗಬೇಕು ತೀರ್ಮಾನ ಮಾಡಲಿ: ಸಿ.ಟಿ ರವಿ

Public TV
1 Min Read
MLA CT Ravi

ಮೈಸೂರು: ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದವರಿಗೆ ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

ಸತ್ಯವಂತರಿಗೆ ಇದು ಕಾಲವಲ್ಲ. ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟಿಹಾಕಿದವರು ಯಾರು? ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಇದೇ ವೇಳೆ ಟ್ರಾಫಿಕ್ ರೂಲ್ಸ್ ಬಗ್ಗೆ ಮಾತನಾಡಿ, ತಪ್ಪು ಮಾಡದೇ ಇರುವವರಿಗೆ ದಂಡದ ಪ್ರಶ್ನೆ ಬರೋದಿಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತೆ. ನಾನೂ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಮಿನಿಸ್ಟರ್ ಇರಲಿ, ಸಿಎಂ ಇರಲಿ ಎಲ್ಲರಿಗೂ ದಂಡ ಹಾಕಬೇಕು ಎಂದು ತಿಳಿಸಿದರು.

PROTEST 2

ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡಬೇಕೆಂಬ ಕೂಗು ಎದ್ದಿದೆ. ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ. ಅಮೆರಿಕಾದಲ್ಲಿ ಶೇ. 97ರಷ್ಟು ಜನ ತೆರಿಗೆ ಕಟ್ಟುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಎಂದು ನೂರು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕಾದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ ಎಂದು ಕೇಂದ್ರ ಸರ್ಕಾರದ ದಂಡ ಪರಿಷ್ಕರಣೆಯನ್ನು ಸಿಟಿ ರವಿ ಸಮರ್ಥಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *