ವಾಹನ ಸವಾರರೇ ಎಚ್ಚರ – ನಾಳೆ ಬೆಂಗಳೂರಿನಾದ್ಯಂತ ಟ್ರಾಫಿಕ್ ಜಾಮ್

Public TV
2 Min Read
BNG TRAFFIC

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಒಕ್ಕಲಿಗ ಸಮುದಾಯದವರು ಪ್ರತಿಭಟನಾ ರ‍್ಯಾಲಿ ಆಯೋಜಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ.

ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ಬೆಳಗ್ಗೆ 11 ಗಂಟೆಗೆ ರ‍್ಯಾಲಿ ಆರಂಭವಾಗಲಿದ್ದು, ವಿವಿಧ ಸಂಘಟನೆಗಳು ಸೇರಿದಂತೆ ಒಕ್ಕಲಿಗ ಸಮುದಾಯದ ಜನರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಡಿಕೆಶಿ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾಮಾನ್ಯವಾಗಿ ನಗರದಲ್ಲಿ ಯಾವುದೇ ಬೃಹತ್ ಪ್ರತಿಭಟನೆ ನಡೆದರೂ ಕೂಡ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಎದುರಿಸುತ್ತಾರೆ. ನಾಳೆಯ ಪ್ರತಿಭಟನೆಯಲ್ಲಿ ಸುಮಾರು 50 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

BNG TRAFFIC A copy

ನಾಳೆ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಈ ರ‍್ಯಾಲಿ ಸಂಜೆಯವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ಪೊಲೀಸರು ಈಗಾಗಲೇ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಆರಂಭವಾಗುವ ಈ ರ‍್ಯಾಲಿಯನ್ನು ಫ್ರೀಡಂ ಪಾರ್ಕ್ ವರೆಗೂ ನಡೆಸಲಿದ್ದೇವೆ ಎಂದು ಈಗಾಗಲೇ ಒಕ್ಕಲಿಗ ಸಮುದಾಯದ ಮುಖಂಡರು ಘೋಷಿಸಿದ್ದಾರೆ.

ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ಟಾರ್ಗೆಟ್ ಮಾಡಿ ಒಕ್ಕಲಿಗರ ದಮನ ಮಾಡುತ್ತಿದೆ. ದುರುದ್ದೇಶಪೂರ್ವಕವಾಗಿ ಡಿಕೆಶಿ ಬಂಧನ ಮಾಡಲಾಗಿದೆ. ಕಾಫಿ ಕೆಫೆ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೋಪಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಒಕ್ಕಲಿಗ ಸಮುದಾಯ ಸಿಡಿದೆದ್ದಿದೆ. ಹಿನ್ನೆಲೆಯಲ್ಲಿಯೇ ನಾಳೆ ಪ್ರತಿಭಟನೆಯನ್ನು ಬಿಜೆಪಿ ಸರ್ಕಾರದ ವಿರುದ್ಧ ಆಯೋಜಿಸಲಾಗಿದೆ.

BNG TRAFFIC A copy 1

ಎಲ್ಲೆಲ್ಲಿ ಸಮಸ್ಯೆ ಆಗಬಹುದು?
ಪ್ರತಿಭಟನಾ ಮೆರವಣಿಗೆ 11 ಗಂಟೆಗೆ ಆರಂಭವಾಗಲಿದೆ ಎಂಬ ಮಾಹಿತಿ ಲಭಿಸಿದ್ದು, ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವುದರಿಂದ ಬೆಳಗ್ಗೆ 8 ಗಂಟೆ ವೇಳೆಗೆ ಟ್ರಾಫಿಕ್ ಜಾಮ್ ಉಂಟಾಗುವ ನಿರೀಕ್ಷೆ ಇದೆ. ಪರಿಣಾಮ ನಗರದ ಜೆ.ಸಿ. ರೋಡ್, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್.ಸರ್ಕಲ್, ಆನಂದರಾವ್ ವೃತ್ತ, ನೃಪತುಂಗ ರೋಡ್, ವಿಧಾನಸೌಧ ಸುತ್ತಮುತ್ತ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಪ್ರತಿಭಟನೆ ಸಾಗುವ ಹಾದಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೂ ವಾಹನ ಸಂಚಾರ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ ಯಾವುದೇ ಅಶಾಂತಿ ನಡೆಯದಂತೆ 2 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಂಚಾರ ನಿಷೇಧ ಆಗಿರುವುದರಿಂದ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ ಎಂದು ಇದೇ ವೇಳೆ ಪೊಲೀಸ್ ಆಯುಕ್ತರು ಹೆಚ್ಚಿನ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *