ಕೊಪ್ಪಳ: ಹೆತ್ತ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.
ಅಭಿನವ ಕೊಲೆ ಆದ ಮಗ. ಸೋಮವಾರ ಸಂಜೆ ಸೋಮನಾಳ ಗ್ರಾಮದ ಪ್ರತಿಮಾ ತನ್ನ 16 ತಿಂಗಳ ಮಗ ಅಭಿನವನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಗುವಿನ ತಂದೆ ಶಶಿಧರ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಶಿಧರ್ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿ ಪ್ರತಿಮಾಳನ್ನು ವಶಕ್ಕೆ ಪಡೆದಿದ್ದಾರೆ.
ದೂರಿನಲ್ಲಿ ಏನಿದೆ?
ನಾನು ಸುಮಾರು 5-6 ತಿಂಗಳಿನಿಂದ ದುಡಿಯದೆ ಮನೆಯಲ್ಲಿಯೇ ಇದ್ದುದರಿಂದ ನನ್ನ ಪತ್ನಿ ನನಗೆ ಪ್ರತಿದಿನ ನೀನು ದುಡಿಯದೇ ಮನೆಯಲ್ಲಿ ಕುಳಿತರೆ ನನ್ನನ್ನು ಮತ್ತು ನನ್ನ ಮಗನನ್ನು ಹೇಗೆ ಸಾಕುತ್ತೀಯಾ. ನೀನು ದುಡಿಯದಿದ್ದರೆ ಮಗನ ಮುಂದಿನ ಭವಿಷ್ಯ ಏನು. ನೀನು ಈ ರೀತಿ ದುಡಿಯದೇ ಇದ್ದರೆ ಮಗನನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಪ್ರತಿದಿನ ಹೇಳುತ್ತಿದ್ದಳು. ಈ ವಿಷಯ ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರಿಗೆ ಮತ್ತು ನಮ್ಮ ತಾಯಿಗೆ ತಿಳಿಸಿದಾಗ ಅವರು ಸಹ ಆಕೆಗೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದರು.
ಸೋಮವಾರ ನಾನು ಕಾರಟಗಿಗೆ ಬಂದು ನವಲಿ ರಸ್ತೆಯಲ್ಲಿರುವ ಶ್ರೀ ಚನ್ನಬಸಪ್ಪ ಅವರ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕಾಗಿ ಕೇಳಿದ್ದೇನು. ಅವರು ಇಂದು ಬೆಳಗ್ಗೆ 6 ಗಂಟೆಗೆ ಬರಲು ಹೇಳಿದ್ದರು. ನಾನು ಕೆಲಸಕ್ಕೆ ಸೇರಿದ ವಿಷಯವನ್ನು ಹೇಳದೇ ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟು ಕಾರಟಗಿಯ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕೆ ಬಂದೆ. ನಂತರ ಸಂಜೆ ನನ್ನ ತಾಯಿ ಪಾರ್ವತಮ್ಮ ನನಗೆ ಫೋನ್ ಮಾಡಿ ಮೇಲಿನ ರೂಮಿನಲ್ಲಿ ನಿನ್ನ ಪತ್ನಿ ಬೆಳಗ್ಗೆಯಿಂದ ಒಳಗಡೆಯಿಂದ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಬಡಿದರೂ ತೆಗೆಯುತ್ತಿಲ್ಲ. ನೀನು ಕೂಡಲೇ ಬಾ ಎಂದು ತಿಳಿಸಿದರು. ಬಳಿಕ ನಾನು ಮನೆಗೆ ಹೋಗಿ ಬಾಗಿಲು ಬಡಿದೆ. ಆಗ ಪತ್ನಿ ಬಾಗಿಲು ತೆರೆದಿದ್ದಾಳೆ. ಈ ವೇಳೆ ಮಗು ಮೃತಪಟ್ಟಿತ್ತು. ಅಲ್ಲದೆ ಮಗುವಿನ ಎಡಕಿವಿಯ ಹತ್ತಿರ ತರಚಿದ ಗಾಯ, ಮೇಲಿನ ತುಟಿಯಲ್ಲಿ ಸ್ವಲ್ಪ ರಕ್ತ ಬಂದಂತೆ ಕಂಡು ಬಂದಿತ್ತು.
ಈ ಬಗ್ಗೆ ನನ್ನ ಪತ್ನಿಯನ್ನು ವಿಚಾರಿಸಿದಾಗ ನೀಡು ದುಡಿಯದೇ ಇದ್ದುದ್ದರಿಂದ ನಾನೇ ಮಗುವಿನ ಬಾಯಿ ಹಾಗೂ ಮೂಗನ್ನು ಕೈಯಿಂದ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದೇನೆ ಎಂದು ಹೇಳಿದ್ದಾಳೆ. ನನ್ನ ಮಗ ಅಭಿನವನನ್ನು ಕೊಲೆ ಮಾಡಿದ ನನ್ನ ಪತ್ನಿಯ ವಿರುದ್ಧ ಕಾನೂನು ಕ್ರಮಕೈಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.