ಬೆಂಗಳೂರು: ಇಡಿ ಬಂಧನದಲ್ಲಿರುವ ಟ್ರಬಲ್ ಶೂಟರ್ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇಷ್ಟು ದಿನ ದೆಹಲಿಯ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಇಡಿ, ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್(ಸೌರಶಕ್ತಿ ಉತ್ಪಾದನಾ ಸ್ಥಾವರ) ಮೇಲೆ ಕಣ್ಣು ಹಾಕಿದೆ.
ದೆಹಲಿಯಲ್ಲಿ ಸಿಕ್ಕ 8.59 ಕೋಟಿ ರೂಪಾಯಿ ಬೆನ್ನಹಿಂದೆ ಬಿದ್ದಿರುವ ಇಡಿ ಅಧಿಕಾರಿಗಳು ಈಗ ಬಳ್ಳಾರಿಯಲ್ಲಿನ ಸೋಲಾರ್ ಪವರ್ ಪ್ಲಾಂಟ್ ಮೇಲೆ ಕಣ್ಣು ಹಾಕಿದ್ದಾರೆ. ಹಗರಿಬೊಮ್ಮನ ಹಳ್ಳಿಯಲ್ಲಿ 1,950 ಎಕರೆ ಭೂಮಿಯಲ್ಲಿರುವ ಸೋಲಾರ್ ಪವರ್ ಪ್ಲಾಂಟ್ ನ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈ ಯೋಜನೆಯಲ್ಲಿ ಡಿಕೆಶಿಯವರದ್ದೇ ಶೇಕಡ 60ರಷ್ಟು ಪಾಲುದಾರಿಕೆ ಇದೆ ಎನ್ನಲಾಗಿದ್ದು, ಒಂದು ವೇಳೆ ಇದು ಅಕ್ರಮವೆಂದು ಮೇಲ್ನೋಟಕ್ಕೆ ಕಂಡುಬಂದಲ್ಲಿ ಈ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅವಕಾಶವಿದೆ. ಸದ್ಯ ಇಡಿ ಅಧಿಕಾರಿಗಳ ಸುಪರ್ದಿಗೆ ಸೊಲಾರ್ ಪವರ್ ಪ್ಲಾಂಟ್‍ನ ದಾಖಲೆಗಳು ಸಿಕ್ಕಿರುವುದು ಡಿಕೆಶಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಲಾರ್ ಪವರ್ ಪ್ಲಾಂಟ್ ಬಿಡಿಸಿಕೊಳ್ಳಬೇಕು ಎಂದರೆ ಡಿಕೆಶಿ ನ್ಯಾಯಾಲಯದ ಮೊರೆ ಹೋಗಬೇಕಿದೆ.
ಅಕ್ರಮ ಹಣ ವರ್ಗಾವಣೆ, ಹವಾಲಾ ಕೇಸ್‍ನಲ್ಲಿ ಕಳೆದೊಂದು ವಾರದಿಂದ ಇಡಿ ಹಿಡಿತದಲ್ಲಿರುವ ಕನಕಪುರ ಬಂಡೆ ಡಿಕೆಶಿ ಬಳಲಿ ಬೆಂಡಾಗಿದ್ದಾರೆ. ಡಿಕೆಶಿ ಇಂದು ಏಳನೇ ದಿನದ ವಿಚಾರಣೆ ಎದುರಿಸಲಿದ್ದಾರೆ. ಸೆಪ್ಟೆಂಬರ್ 4 ರಿಂದ 13 ರವರೆಗೂ ಅಂದರೆ ಒಟ್ಟು 10 ದಿನಗಳ ಕಾಲ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಕಸ್ಟಡಿಗೆ ನೀಡಿ ಇಡಿ ವಿಶೇಷ ಕೋರ್ಟ್ ಆದೇಶಿಸಿತ್ತು. ಆದೇಶದಂತೆ ಇನ್ನು ಮೂರು ದಿನಗಳಲ್ಲಿ ಕಸ್ಟಡಿ ಅಂತ್ಯವಾಗಲಿದೆ.
ಇತ್ತ ಪ್ರಕರಣದ ಮತ್ತಷ್ಟು ವಿಚಾರಣೆಗಾಗಿ ಡಿಕೆ ಶಿವಕುಮಾರ್ ಅವರನ್ನು ಇನ್ನೂ ನಾಲ್ಕು ದಿನ ಕಸ್ಟಡಿಗೆ ಕೇಳಲು ಇಡಿ ಅಧಿಕಾರಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 13ರಂದು ಇಡಿ ಕೋರ್ಟ್ ಮುಂದೆ ಹಾಜರುಪಡಿಸಿ ಮತ್ತೆ ನಾಲ್ಕು ದಿನ ಕಸ್ಟಡಿಗೆ ಪಡೆದುಕೊಳ್ಳುವ ಲೆಕ್ಕಾಚಾರ ಇಡಿ ಅಧಿಕಾರಿಗಳು ಹಾಕಿಕೊಂಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.