24 ಗಂಟೆಗಳಲ್ಲಿ 5 ಬಾರಿ ಕದನ ವಿರಾಮ ಉಲ್ಲಂಘಿಸಿದ ಪಾಕ್

Public TV
1 Min Read
army 2

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಮತ್ತು ಸುಂದರ್‍ಬಾನಿ ಪ್ರದೇಶಗಳಲ್ಲಿ ಭಾನುವಾರ ಬೆಳಗ್ಗೆ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿದೆ, ಕಳೆದ 24 ಗಂಟೆಗಳಲ್ಲಿ ಪಾಕ್ 5 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿ ದುಸ್ಸಾಹಸ ಮೆರೆದಿದೆ.

ಪಾಕ್ ಮಾಡಿದ ದುಸ್ಸಾಹಸಕ್ಕೆ ಭಾರತೀಯ ಸೇನೆಯು ಕೂಡ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದ ಪಡೆಗಳು ಬೆಳಗ್ಗೆ 10:00 ರಿಂದ ನಿಯಂತ್ರಣ ರೇಖೆ(ಎಲ್‍ಒಸಿ) ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತ ಸೇನೆ ಕೂಡ ಗುಂಡಿನ ದಾಳಿ ಮೂಲಕವೇ ಪ್ರತ್ಯುತ್ತರ ನೀಡಿದೆ.

Pak

ಸೆಪ್ಟೆಂಬರ್ 2ರ ನಂತರ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಕಣಿವೆಯಲ್ಲಿ ಶಾಂತಿಯನ್ನು ಕದಡುವ ಪಾಕಿಸ್ತಾನದ ದುಷ್ಕೃತ್ಯಕ್ಕೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದರು. ರಾಜಸ್ಥಾನದ ಅಲ್ವಾರ್‍ನ ರೂಪಂಗಢ ತಹ್ಸೀಲ್‍ನ ಭಡೂನ್ ಗ್ರಾಮದ ನಿವಾಸಿ ಗ್ರೆನೇಡಿಯರ್ ಹೆಮರಾಜ್ ಜಾಟ್(23) ಹುತಾತ್ಮರಾದ ಯೋಧರು. ಇವರು ಮಾರ್ಚ್ 2017 ರಂದು ಭಾರತೀಯ ಸೈನ್ಯಕ್ಕೆ ನೇಮಕವಾಗಿದ್ದರು.

ಶನಿವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮಾತನಾಡಿ, ಗಡಿಯಲ್ಲಿ 20 ಕಿ.ಮೀ ದೂರದಲ್ಲಿ ಪಾಕಿಸ್ತಾನಿ ಸಂವಹನ ಗೋಪುರಗಳಿವೆ, ಅವರು ಅಲ್ಲಿಂದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಜೊತೆಗೆ ಪಾಕಿಸ್ತಾನ ಒಳನುಸುಳುವಿಕೆ ಪ್ರಯತ್ನಗಳನ್ನು ಮಾಡಿದರೆ, ಅದರ ವಿರುದ್ಧ ಹೋರಾಡಲು ಭಾರತೀಯ ಸೈನ್ಯ ಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧ 370ನೇ ವಿಧಿಯನ್ನು ರದ್ದುಗೊಳಿದ ಕೇಂದ್ರ ಸರ್ಕಾರದ ಕ್ರಮವನ್ನು ಬಹುತೇಕ ಕಾಶ್ಮೀರಿಗಳು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದರು.

army 1 1

ಆಗಸ್ಟ್ 30ರಂದು ಸರ್ಕಾರ ಕದನ ವಿರಾಮ ಉಲ್ಲಂಘನೆ ಕುರಿತು ವರದಿ ಬಿಡುಗಡೆ ಮಾಡಿತ್ತು. ವರದಿ ಪ್ರಕಾರ, ಭಾರತ ಸರ್ಕಾರ 370ನೇ ವಿಧಿ ರದ್ದು ಮಾಡಿದ ಬಳಿಕ ಪಾಕಿಸ್ತಾನ ಸೇನೆ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅಲ್ಲದೆ 2019ರ ಆಗಸ್ಟ್ 30ರವರೆಗೆ ಬರೋಬ್ಬರಿ 1,900 ಬಾರಿ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿರುವುದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *