ದಾವಣಗೆರೆ: 17 ಮಂದಿ ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಸರ್ಕಾರ ಬಂದಿದೆ ಎಂದು ಶಾಸಕ ರೇಣುಕಾಚಾರ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಬಂದಿದೆ ಎಂದಿದ್ದಾರೆ.
ಪಕ್ಷ ನನ್ನನ್ನು ಗುರುತಿಸಿ ಸ್ಥಾನಮಾನ ನೀಡಿದೆ. ಕೊಟ್ಟಂತಹ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಸಮಾಧಾ£ಪಡಿಸಲು ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದಾರೆ ಎನ್ನುತ್ತಾರೆ. ಆದರೆ ನನಗೆ ಅಂತಹ ಯಾವುದೇ ಅಸಮಾಧಾನವಿಲ್ಲ. ನಮಗೆ ಪಕ್ಷ ಮೊದಲು ಅಧಿಕಾರ, ಸ್ಥಾನ ಮಾನ ನಂತರ ಎಂದು ಹೇಳಿದರು.
ಇದೇ ವೇಳೆ ಅಬಕಾರಿ ಸಚಿವ ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಹುಚ್ಚು ಹುಚ್ಚಾದ ಹೇಳಿಕೆ ಕೊಡುವುದನ್ನ ನಿಲ್ಲಿಸಲಿ. ಮನೆಮನೆಗೆ, ಹಟ್ಟಿಗಳಿಗೆ ಮದ್ಯ ಸರಬರಾಜು ಮಾಡುವುದಾಗಿ ಹೇಳಿ ಸರ್ಕಾರಕ್ಕೆ ಡ್ಯಾಮೇಜ್ ಮಾಡಬೇಡಿ. ಸಿಎಂ ಸಲಹೆ ಪಡೆದು ಪ್ರಬುದ್ಧ ರಾಜಕಾರಣ ಮಾಡಿ ಎಂದು ಸಲಹೆ ನೀಡಿದರು.
ನಾನು ಅಬಕಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ವಿಧಾನಸೌದದ ಮೂರನೇ ಮಹಡಿಯಲ್ಲಿ ಮಾತ್ರ ಅಧಿಕಾರ ಇತ್ತು. ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕಳ್ಳಭಟ್ಟಿ, ನಕಲಿ ಮದ್ಯ ತಡೆಗಟ್ಟಿ ಸರ್ಕಾರಕ್ಕೆ ಆದಾಯ ತಂದಿದ್ದೇನೆ. ಹೀಗಾಗಿ ನಾಗೇಶ್ ಅವರು ಆತುರದ ಹೇಳಿಕೆ ಕೊಡದೇ ಸರಿಯಾಗಿ ಜವಾಬ್ದಾರಿ ನಿರ್ವಹಿಸಲಿ ಎಂದರು.
https://www.youtube.com/watch?v=-f8ZukxBbbY