ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ದುರ್ಯೋಧನ ಮತ್ತು ದುಶ್ಶಾಸನ ಇದ್ದ ಹಾಗೆ ಎಂದು ಯಾದಗಿರಿಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಹೇಳಿದ್ದಾರೆ.
ಯಾದಗಿರಿಯ ತಮ್ಮ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ದುರ್ಯೋಧನ ಮತ್ತು ದುಶ್ಶಾಸನ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ನಾವು ಮಾಡುವ ಕೆಲಸಕ್ಕೆ ಎಲ್ಲರೂ ಸಂತೋಷ ಪಡುತ್ತಾರೆ ಎಂದು ಇಬ್ಬರೂ ನಕ್ಕರು. ಆಗ ಅವರು ಮಾಡುತ್ತಿರುವ ತಪ್ಪಿನ ಅರಿವು ಅವರಿಗೆ ಆಗಿರಲಿಲ್ಲ. ಮುಂದೆ ನಮಗಾಗಿ ಮಾರಿ ಹಬ್ಬ ಕಾದಿದೆ ಎಂದು ತಿಳಿದುಕೊಂಡಿರಲಿಲ್ಲ. ಈಗ ಮೋದಿ ಮತ್ತು ಅಮಿತ್ ಶಾ ಸಹ ಅದೇ ತರ ವರ್ತನೆ ಮಾಡುತ್ತಿದ್ದಾರೆ. ಮುಂದೆ ಅವರಿಗೂ ಮಾರಿ ಹಬ್ಬ ಕಾದಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಹರಿಹಾಯ್ದರು.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಆದರೂ ಅವರು ಮಾಡಿದ್ದೇ ಸರಿ ಎಂದು ಓಡಾಡುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಇತ್ತೀಚಿನ ಕೆಲಸಗಳಿಗೆ ಹೋಲಿಸಿ ದುರ್ಯೋಧನ ಹಾಗೂ ದುಶ್ಶಾಸನ ಇದ್ದಂತೆ ಎಂದು ಉದಾಹಣೆ ನೀಡಿದ್ದೇನೆ. ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ, ಒಡಿಶಾಗೆ 3 ಸಾವಿರ ಕೋಟಿ ನೀಡಿದ್ದಾರೆ. ಆದರೆ ರಾಜ್ಯದ ನೆರೆ ಸಂತ್ರಸ್ತರಿಗೆ ಎಷ್ಟು ನೀಡಿದ್ದಾರೆ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವತಂತ್ರ ಭಾರತ ಇತಿಹಾಸದಲ್ಲಿ ಚುನಾವಣೆ ವೇಳೆ ನಮ್ಮ ಸೈನಿಕರು ಮತ್ತು ಗಡಿ ವಿಚಾರವನ್ನು ಯಾರು ಬಳಸಿಕೊಂಡಿರಲಿಲ್ಲ. ಆದರೆ, ಪುಲ್ವಾಮಾ ದಾಳಿಯ ವಿಚಾರ ಬಳಸಿಕೊಂಡು ಜನರನ್ನು ಮೂಖ ಪ್ರೇಕ್ಷಕರನ್ನಾಗಿ ಮಾಡಿ ಭಾವನಾತ್ಮಕವಾಗಿ ಮತ ಸೆಳೆದುಕೊಂಡರು. ಚುನಾವಣೆ ವೇಳೆ ರಾಮ ಭೂಮಿ ಅಂತಾರೆ, ರಾಮನ ಮಂದಿರ ಅಂತಿದ್ದರು. ಎಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದರು ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.