ಇಸ್ರೋ ಐತಿಹಾಸಿಕ ಸಾಧನೆಗೆ ಕೆಲವೇ ಗಂಟೆ ಬಾಕಿ – ಚಂದ್ರನ ಅಂಗಳಕ್ಕೆ ಇಳಿಯಲಿವೆ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್

Public TV
2 Min Read
Chandrayaan 2 Vikram 1

– ಮಕ್ಕಳೊಂದಿಗೆ ಪ್ರಧಾನಿ ಮೋದಿ ವೀಕ್ಷಣೆ
– 4ನೇ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಭಾರತ

ಬೆಂಗಳೂರು: ಬಹು ನಿರೀಕ್ಷಿತ ಚಂದ್ರಯಾನ-2ನ ‘ವಿಕ್ರಮ್’ ರಾತ್ರಿ ಸುಮಾರು 1.30ರ ಹೊತ್ತಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಈ ಕುತೂಹಲ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ ಶಾಲಾ ಮಕ್ಕಳೊಂದಿಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಲಿದ್ದಾರೆ.

ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು ‘ಚಂದ್ರಯಾನ-2’ನ ವಿಕ್ರಮ್ ನೌಕೆ ಚಂದ್ರನ ಮೇಲೆ ಇಂದು ತಡರಾತ್ರಿ 1.30ರಿಂದ 2.30ರ ವೇಳೆ(ಶನಿವಾರ ನಸುಕಿನಲ್ಲಿ) ಲ್ಯಾಂಡ್ ಆಗಲಿದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದು, ಇಲ್ಲಿಯ ವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಯು ತೆರಳದ ದಕ್ಷಿಣ ಧ್ರುವದ ಮೇಲೆ ಐತಿಹಾಸಿಕ ಲ್ಯಾಂಡಿಂಗ್‍ಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ.

ಪ್ರಧಾನಿ ನರೇಂದ್ರ ಮೋದಿ ಸಹ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿ ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಮೋದಿ ಅವರೊಂದಿಗೆ ಪ್ರೌಢಶಾಲೆಗಳ 70 ವಿದ್ಯಾರ್ಥಿಗಳು ಸಹ ಈ ವಿಸ್ಮಯವನ್ನು ಆನಂದಿಸಲಿದ್ದಾರೆ. ಮೋದಿ ಹಾಗೂ ಮಕ್ಕಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಟಿವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ.

ಈ ವೆರೆಗೆ ವಿಶ್ವದ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇಂದು ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನಂಗಳಕ್ಕೆ ಇಳಿದರೆ ರಷ್ಯಾ, ಅಮೇರಿಕ ಹಾಗೂ ಚೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ವಿಶೇಷವೆಂದರೆ ಯಾವ ದೇಶವೂ ಕಾಲಿಡದ ಹಾಗೂ ಬಿಸಿಲು ಕಾಣದ ಚಂದ್ರನ ದಕ್ಷಿಣ ದ್ರುವಕ್ಕೆ ಚಂದ್ರಯಾನ-2 ನೌಕೆ ಕಾಲಿಡಲಿದೆ.

ರಾತ್ರಿಯ ಸಾಹಸ: ಇಂದು ತಡರಾತ್ರಿ 1.30 ರಿಂದ ಚಂದ್ರನ ಅಂಗಳದ ಕಡೆಗೆ ಇಳಿಯುವ ಪ್ರಕ್ರಿಯೆ ಆರಂಭವಾಗುತ್ತದೆ. ಸುಮಾರು 15 ನಿಮಿಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ನಂತರ 1.30ರಿಂದ 2.30ರ ನಡುವೆ ಅತ್ಯಂತ ಭೀತಿಯ ಟಚ್‍ಡೌನ್ ಪ್ರಕ್ರಿಯೆ ನಡೆಸಲಾಗುತ್ತದೆ. ಟಚ್‍ಡೌನ್ ಬಳಿಕ ಬೆಳಗ್ಗೆ 5.30ರಿಂದ 6.30ರ ನಡುವೆ ‘ವಿಕ್ರಮ್’ ಲ್ಯಾಂಡರ್ ಒಳಗಿಂದ ರೋವರ್ ‘ಪ್ರಜ್ಞಾನ್’ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಸುಮಾರು 14 ದಿನಗಳ ಕಾಲ 500 ಮೀ. ಸಂಚರಿಸಿ ಚಂದ್ರನ ಮೇಲೆ ಅಧ್ಯಯನ ಮಾಡಲಿದೆ. ಉಳಿದಂತೆ ಆರ್ಬಿಟರ್, ಒಂದು ವರ್ಷ ಕಾಲ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತದೆ.

ಸೆಪ್ಟೆಂಬರ್ 2ರಂದು ಮಾಡ್ಯುಲ್ ನಿಂದ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಇದನ್ನು ವಿಜ್ಞಾನಿಗಳು ಮಗಳು ತವರು ಮನೆಯಿಂದ ಗಂಡನ ಮನೆಗೆ ಹೋದಂತೆ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದರು.
Chandrayaan 2 Vikram 3

ಆರ್ಬಿಟರ್ ನಿಂದ ಲ್ಯಾಂಡರ್ ವಿಕ್ರಮ್ ಬೇರ್ಪಡಿಸಲು ವಿಜ್ಞಾನಿಗಳು ಸಮಯ ನಿಗದಿ ಮಾಡಿದ್ದರು. ನಿಗದಿ ಸಮಯದಲ್ಲಿಯೇ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿತ್ತು. ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಬೇರ್ಪಟ್ಟಿದ್ದರಿಂದ ವಿದೇಶಗಳಿಂದ ಇಸ್ರೋಗೆ ಶುಭಾಶಯಗಳು ಹರಿದು ಬಂದಿದ್ದವು.

Share This Article
Leave a Comment

Leave a Reply

Your email address will not be published. Required fields are marked *