ಲಕ್ನೋ: ಟಿಕ್‍ಟಾಕ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಯುವಕನನ್ನು ಕಳ್ಳತನದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಾರೂಕ್ ಖಾನ್(23) ಅರೆಸ್ಟ್ ಆದ ಯುವಕ. ಶಾರೂಕ್ ಖಾನ್ ಟಿಕ್‍ಟಾಕ್‍ನಲ್ಲಿ ಯಾವಾಗಲೂ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದನು. ಅಲ್ಲದೆ ಆತನ ಮೂವರು ಸ್ನೇಹಿತರಾದ ಆಸೀಫ್, ಫೈಯಾಜ್ ಹಾಗೂ ಮುಕೇಶ್ ಆತನಿಗೆ ಸಾಮಾಜಿಕ ಜಾಲತಾಣದಲ್ಲಿ ಆತನ ಪೋಸ್ಟ್ ಗೆ ಸಹಾಯ ಮಾಡುತ್ತಿದ್ದರು.
ಇಂದು ಬೆಳಗ್ಗೆ ಪೊಲೀಸರು ಶಾರೂಕ್ ಹಾಗೂ ಆತನ ಮೂವರು ಸ್ನೇಹಿತರನ್ನು ಕಳ್ಳತನದ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳ ಬಳಿ ಐದು ಮೊಬೈಲ್, ಒಂದು ಬೈಕ್ ಹಾಗೂ 3 ಸಾವಿರ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನೋಯ್ಡಾದ ವಿವಿಧ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ನಾವು ಅವರನ್ನು ಹಿಡಿಯಲು ಸಾಧ್ಯವಾಯಿತು. ಅವರು ಪ್ರಯಾಣಿಕರಿಂದ ಮೊಬೈಲ್ ಹಾಗೂ ಹಣವನ್ನು ಕದಿಯುತ್ತಿದ್ದರು. ಬಳಿಕ ಬಾಲ್ಟಾ 2, ನಾಲೆಡ್ಜ್ ಪಾರ್ಕ್ ಮತ್ತು ಸುರ್ಜಾಪುರದಲ್ಲಿ ಸಕ್ರಿಯರಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ರನ್‍ವಿಜಯ್ ಸಿಂಗ್ ತಿಳಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಕನಿಷ್ಠ ಆರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ನಾಲ್ವರು ಒಪ್ಪಿಕೊಂಡಿದ್ದಾರೆ. ನಾಲ್ವರಲ್ಲಿ ಮುಕೇಶ್ ಎಂಬವನು ಬಿಹಾರ್ ಮೂಲದವನಾಗಿದ್ದು, ಉಳಿದ ಮೂವರು ಬುಲಂದ್‍ಶಹರ್ ನಿವಾಸಿಗಳು ಎಂದು ಪೊಲೀಸರು ಹೇಳಿದ್ದಾರೆ.