ಮಂಡ್ಯ: ಪೋಲಿಸರ ಎದುರೇ ಪೆಟ್ರೋಲ್ ಸುರಿದುಕೊಂಡು ರೈತರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಗಡಿಭಾಗ ಕೆಸ್ತೂರು ಎಲ್ಲೆಯಲ್ಲಿ ಬೊಮ್ಮನಾಯಕನಹಳ್ಳಿ ಗ್ರಾಮದ ಹತ್ತಾರು ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾತ-ಮುತ್ತಾತರ ಕಾಲದಿಂದಲೂ ಉಳುಮೆ ಮಾಡುತ್ತಿದ್ದ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳದಂತೆ ಒತ್ತಾಯಿಸಿದ್ದಾರೆ.
ಕೆಸ್ತೂರು ಗ್ರಾಮದ ಗಡಿಭಾಗದಲ್ಲಿ ಸುಮಾರು ಎಂಟೂವರೆ ಎಕರೆ ಜಮೀನನ್ನು 40-50 ವರ್ಷದಿಂದ ರೈತರು ಉಳುಮೆ ಮಾಡುತ್ತಿದ್ದು, ಕಳೆದ ವರ್ಷ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಲು ಆ ಜಾಗವನ್ನ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತ್ತು. ಈ ಸಂದರ್ಭ ಪ್ರತಿಭಟಿಸಿದ್ದ ರೈತರನ್ನು ಪೋಲಿಸರು ಬಂಧಿಸಿದ್ದರು. ಮಳೆ ಬಿದ್ದ ಕಾರಣ ಇದೀಗ ಮತ್ತೆ ಆ ಜಾಗದಲ್ಲಿ ರೈತರು ಉಳುಮೆ ಕಾರ್ಯ ಆರಂಭಿಸಿದ್ದಾರೆ.
ಇದರಿಂದ ಮಧ್ಯಪ್ರವೇಶಿಸಿದ ಪೋಲಿಸರು ಉಳುಮೆ ಕಾರ್ಯ ನಡೆಸದಂತೆ ರೈತರನ್ನು ತಡೆಹಿಡಿದಿದ್ದಾರೆ. ಇದರಿಂದ ಅಸಮಾಧಾನಗೊಂಡ ರೈತರು ಪೊಲೀಸರ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜೊತೆಗೆ ಸರ್ಕಾರ ಹಾಗೂ ಮದ್ದೂರು ಶಾಸಕ ಡಿಸಿ ತಮ್ಮಣ್ಣ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳದಂತೆ ಒತ್ತಾಯಿಸಿದ್ದಾರೆ.