ಉಡುಪಿ: ದೇಶಾದ್ಯಂತ ಗಣೇಶೋತ್ಸವ ಸಂಭ್ರಮ ಮುಂದುವರಿದಿದೆ. ದೇವಾಲಯಗಳ ನಗರಿ ಉಡುಪಿಯಲ್ಲಿ ವಿಘ್ನ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ದೆಂದೂರ್ ಕಟ್ಟೆಯಲ್ಲೂ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ.
ಈ ವೇಳೆ ವಿಶೇಷ ಅತಿಥಿ ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು. ಆ ವಿಐಪಿ ಬರುವ ಮೊದಲು ಪೊಲೀಸ್ ಎಸ್ಕಾರ್ಟ್ ವಾಹನ ಬಂತು, ಜಾಮರ್, ಮೆಟಲ್ ಡಿಟೆಕ್ಟರ್ ಜೊತೆ ಸೈರನ್ ಸೌಂಡ್ ಮಾಡಿಕೊಂಡು ಬಂದಿದೆ. ಒಂದರ ಹಿಂದೆ ಇನ್ನೊಂದು ಸಾಲು ಸಾಲು ಕಾರುಗಳು. ನೋಡ ನೋಡುತ್ತಿದ್ದಂತೆ ಕಾರಿಂದ ಇಳಿದು ಪ್ರಧಾನಿ ನರೇಂದ್ರ ಮೋದಿ ಅವರಂತೆ ಹೋಲುವ ವ್ಯಕ್ತಿಯೊಬ್ಬರು ವೇದಿಕೆಗೆ ಹೋಗಿದ್ದಾರೆ.
ಝೆಡ್ ಪ್ಲಸ್ ಭದ್ರತೆ ನಿಯೋಜನೆಯಲ್ಲಿ, ಫಾರ್ಚೂನರ್ ಕಾರಿನಲ್ಲಿ ಬಂದ ವ್ಯಕ್ತಿಯ ಹೆಸರು ಸದಾನಂದ ನಾಯಕ್ ಆಗಿದ್ದು, ಇವರು ಉಡುಪಿಯ ಮೋದಿ. ಗಂಭೀರವಾಗಿ ಕಾರಿಂದ ಇಳಿದ ಸದಾನಂದ ನಾಯಕ್ ಥೇಟ್ ಮೋದಿಯಂತೆ ಪೋಸ್ ಕೊಟ್ಟು, ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಜನರತ್ತ ಕೈ ಬೀಸುತ್ತಾ ವಾಪಾಸ್ ಆಗಿದ್ದಾರೆ.
ಗಣೇಶೋತ್ಸವದ ಮೆರುಗು ಹೆಚ್ಚಿಸಲು ಸ್ಥಳೀಯ ಯುವಕರು ಡ್ಯೂಪ್ ಮೋದಿಯನ್ನು ಕರೆತಂದರು. ನಮ್ಮೂರಿಗೆ ಬಂದಿದ್ದು ಮೋದಿಯೇ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಕಳೆದ ಬಾರಿ ಟ್ಯಾಬ್ಲೋದಲ್ಲಿ ಮಿಂಚಿದ್ದ ಸದಾನಂದ ನಾಯಕ್ ರಸ್ತೆಯಲ್ಲಿ ಮೋದಿಯಂತೆ ಓಡಾಡಿದ್ದಾರೆ.