ಹಬ್ಬದ ದಿನವೂ ತಪ್ಪಲಿಲ್ಲ ಟೆನ್ಶನ್ – ಇಂದು ಮತ್ತೆ ಇಡಿ ಕಚೇರಿಗೆ ಡಿಕೆಶಿ

Public TV
2 Min Read
DK 3

– ಸುಪ್ರೀಂಗೆ ಅರ್ಜಿ ಸಲ್ಲಿಸಲು ಸಕಲ ಸಿದ್ಧತೆ

ನವದೆಹಲಿ: ಎರಡು ದಿನ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ಎದುರಿಸಿ ಬಂಧನದ ಭೀತಿಯಿಂದ ಪಾರಾಗಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಇಂದು ಮಹತ್ವದ ದಿನವಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಇಂದು ಡಿ.ಕೆ ಮೂರನೇ ದಿನದ ವಿಚಾರಣೆ ಹಾಜರಾಗಲಿದ್ದು ಹಬ್ಬದ ದಿನದಂದೂ ಕನಕಪುರದ ಬಂಡೆಗೆ ಇಡಿ ಅಧಿಕಾರಿಗಳು ಫುಲ್ ಡ್ರೀಲ್ ಮಾಡಲಿದ್ದಾರೆ. ಮತ್ತೊಂದು ಕಡೆ ಸುಪ್ರೀಂಕೋರ್ಟಿನಲ್ಲಿ ಡಿಕೆಶಿ ಅರ್ಜಿ ಸಲ್ಲಿಸಲಿದ್ದು ತುರ್ತು ವಿಚಾರಣೆಗೆ ಒಪ್ಪಿ ಡಿಕೆಗೆ ಕೋರ್ಟ್ ರಿಲೀಫ್ ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಹೌದು. ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಇಂದು ಇಡಿ ಅಧಿಕಾರಿಗಳ ಎದುರು ಮೂರನೇ ದಿನ ವಿಚಾರಣೆಗೆ ಹಾಜರಾಗಲಿದ್ದಾರೆ. ಗಣೇಶ ಹಬ್ಬದ ದಿನವೂ ರಿಲೀಫ್ ಕೊಡದ ಇ.ಡಿ ಅಧಿಕಾರಿಗಳು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಶುಕ್ರವಾರ ಸತತ ಐದು ಗಂಟೆ ಹಾಗೂ ಶನಿವಾರ ಸತತ 8 ಗಂಟೆ ವಿಚಾರಣೆಗೊಳಪಡಿಸಿ ಡಿಕೆಶಿಯಿಂದ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

DKSHI

ಪ್ರಕರಣ ನಾಲ್ಕು ಮಂದಿ ಆರೋಪಿಗಳ ಪ್ರಾಥಮಿಕ ವಿಚಾರಣೆ ಆಧರಿಸಿ ಇಡಿ ಅಧಿಕಾರಿಗಳು ಡಿಕೆಶಿಗೆ ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಡಿಕೆಶಿಯ ಪ್ರತಿ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲು ಮಾಡುತ್ತಿದ್ದಾರೆ. ಮುಂದೆ ಡಿಕೆಶಿ ಹೇಳಿಕೆ ಬದಲಿಸುವ ಅನುಮಾನದ ಹಿನ್ನೆಲೆಯಲ್ಲಿ ಸ್ವತಃ ಡಿಕೆಶಿ ಹಸ್ತಾಕ್ಷರಗಳಿಂದ ಉತ್ತರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅನೀರಿಕ್ಷಿತ ಪ್ರಶ್ನೆಗಳನ್ನು ಎತ್ತುವ ಮೂಲಕ ಟ್ರಬಲ್ ಶೂಟರ್‍ಗೆ ಇಡಿ ಅಧಿಕಾರಿಗಳು ಶಾಕ್ ಕೊಡುತ್ತಿದ್ದಾರೆ.

ಸುಪ್ರೀಂಗೆ ಅರ್ಜಿ ಸಲ್ಲಿಸ್ತಾರಾ ಡಿಕೆಶಿ?
ಇಡಿ ನೀಡಿರುವ ಸಮನ್ಸ್ ರದ್ದು ಕೋರಿ ಹೈಕೊರ್ಟಿಗೆ ಸಲ್ಲಿಸಿದ್ದ ಅರ್ಜಿ ರದ್ದಾದ ಹಿನ್ನೆಲೆಯಲ್ಲಿ ಇಂದು ಡಿ.ಕೆ ಶಿವಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈಗಾಗಲೇ ವಕೀಲರ ಜೊತೆ ಮಾತುಕತೆ ನಡೆಸಿರುವ ಅವರು, ಇಡಿ ಸಮನ್ಸ್ ರದ್ದು ಕೋರಿ ತುರ್ತು ವಿಚಾರಣೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಸುಪ್ರೀಂಕೋರ್ಟ್ ಡಿ.ಕೆ ಶಿವಕುಮಾರ್ ಅರ್ಜಿಯನ್ನು ತುರ್ತು ವಿಚಾರಣೆಗೆ ಒಪ್ಪಿಕೊಳ್ಳುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

DK 2

ದೆಹಲಿ ನಿವಾಸದಲ್ಲೇ ಗೌರಿ ಗಣೇಶ ಹಬ್ಬ!
ಒಂದು ಕಡೆ ಇಡಿ ವಿಚಾರಣೆ ಮತ್ತೊಂದು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ಡಿಕೆ ಪಾಲಿಗೆ ಮಹತ್ವದ ದಿನವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲೇ ಗಣೇಶ ಚತುರ್ಥಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಇಡಿ ಜಂಟಿ ಆಯುಕ್ತೆ ಮೋನಿಕಾ ಶರ್ಮಾ ಎದುರು ಡಿ.ಕೆ ಮನವಿ ಮಾಡಿಕೊಂಡಿದ್ದರು. ಆದರೆ ಡಿ.ಕೆ ಮನವಿಗೆ ಒಪ್ಪದ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗಲೇಬೇಕು ಅಂತಾ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಹೀಗಾಗಿ ಡಿಕೆಶಿ ದೆಹಲಿಯಲ್ಲೇ ಉಳಿದುಕೊಂಡಿದ್ದು ಇಂದು ಸಹೋದರ ಡಿ.ಕೆ ಸುರೇಶ್ ನಿವಾಸದಲ್ಲಿ ಹಬ್ಬ ಮಾಡಲಿದ್ದಾರಂತೆ. ವಿಚಾರಣೆಗೂ ಮುನ್ನ ವಿಘ್ನೇಶ್ವರನಿಗೆ ಪೂಜೆ ನೆರವೇರಿಸಲಿದ್ದು ಜೊತೆಗೆ ಮನೆ ಸಂಪ್ರದಾಯದಂತೆ ಹಿರಿಯರ ಪೂಜಾ ಕಾರ್ಯ ಮಾಡಲಿದ್ದು ಬೇಗ ರಿಲೀಫ್ ಸಿಗಲಿ ಎಂದು ಪ್ರಾರ್ಥಿಸಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *