– 6 ತಿಂಗ್ಳು ಅವನು, ಇನ್ನಾರು ತಿಂಗ್ಳು ಅವಳಾಗುವ ಸ್ವಾಮೀಜಿ
ಬಾಗಲಕೋಟೆ: ಆರು ತಿಂಗಳು ಅವನು, ಇನ್ನಾರು ತಿಂಗಳು ಅವಳಾಗುವ ವಿಚಿತ್ರ ಸ್ವಾಮೀಜಿಯನ್ನು ಚಿಕ್ಕಸಂಗಮದ ಗ್ರಾಮದಿಂದ ಸ್ಥಳೀಯರು ಹೊರಹಾಕಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಸಂಗಮದ ಗ್ರಾಮಸ್ಥರು ವಿದ್ಯಾಹಂಸ ಭಾರತಿ ಸ್ವಾಮೀಜಿಯನ್ನು ಗ್ರಾಮದಿಂದ ಹೊರ ಹಾಕಿದ್ದಾರೆ. ವಿದ್ಯಾಹಂಸ ಭಾರತಿ ಸ್ವಾಮೀಜಿ ಮೈಸೂರು ಜಿಲ್ಲೆ ಪಾಂಡವಪುರ ತಾಲೂಕಿನ ಚಂದ್ರ ಗ್ರಾಮದ ಬಳಿ ಇರುವ ತ್ರಿಧಾಮಕ್ಷೇತ್ರ ಮಹಾಕಾಳಿ ಚಕ್ರೇಶ್ವರಿ ಪೀಠಾಧ್ಯಕ್ಷರಾಗಿದ್ದಾರೆ. ಸ್ವಾಮಿಜಿ ವಿಚಿತ್ರ ವೇಷ ಭೂಷಣಗಳನ್ನು ನೋಡಿದ ಗ್ರಾಮಸ್ಥರೆಲ್ಲರೂ ಗ್ರಾಮದಿಂದ ಕಳುಹಿಸಿದ್ದಾರೆ.
ವಿದ್ಯಾಹಂಸ ಭಾರತಿ ಸ್ವಾಮೀಜಿ ಚಾತುರ್ಮಾಸ ಆಚರಿಸಲು ಚಿಕ್ಕಸಂಗಮಕ್ಕೆ ಬಂದಿದ್ದರು ಎನ್ನಲಾಗಿದೆ. ಚಿಕ್ಕಸಂಗಮದಲ್ಲಿ ಪ್ರತ್ಯಂಗಿರಾ ಹೋಮ, ಹವನ ಹೆಸರಿನಲ್ಲಿ ಗ್ರಾಮಸ್ಥರಿಂದ ಚಿನ್ನಾಭರಣ ಮತ್ತು ಹಣ ಪಡೆದುಕೊಂಡಿದ್ದು ಎಂದು ತಿಳಿದು ಬಂದಿದೆ. ದೊಡ್ಡ ದೊಡ್ಡ ಸ್ವಾಮೀಜಿಗಳು, ಗಣ್ಯವ್ಯಕ್ತಿಗಳ ಜೊತೆಗಿನ ಭಾವಚಿತ್ರ ತೋರಿಸಿ ನಂಬಿಕೆ ಹುಟ್ಟಿಸಿಕೊಂಡಿದ್ದ ಎಂದು ಗ್ರಾಮಸ್ಥರು ಹೇಳುತ್ತಾರೆ.
ಈ ವಿದ್ಯಾಹಂಸ ಭಾರತಿ ಸ್ವಾಮೀಜಿ ವಿರುದ್ಧ 2018ರಲ್ಲಿ ಮೈಸೂರಿನ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಚಾತುರ್ಮಾಸದ ಪೂಜೆ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಸ್ವಾಮೀಜಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದರು.