-ಉಪಚುನಾವಣೆ ಮುನ್ನವೇ ಹೊಸಕೋಟೆಯಲ್ಲಿ ಕ್ಯಾಂಪೇನ್
ಬೆಂಗಳೂರು: ಒಂದು ಕಾಲದ ಆಪ್ತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧವೇ ಮಾಜಿ ಸಿಎಂ ಸಿದ್ದರಾಮಯ್ಯ ರಣಕಹಳೆಯನ್ನು ಮೊಳಗಿಸಿದ್ದಾರೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಹೊಸಕೋಟೆಯ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಎಂಟಿಬಿ ನಾಗರಾಜ್ ಉಪಚುನಾವಣೆಗೆ ಅಖಾಡವನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಎಂಟಿಬಿ ನಾಗರಾಜ್ ನೇರವಾಗಿ ಸಿದ್ದರಾಮಯ್ಯರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಶಿಷ್ಯ ಎಂಟಿಬಿ ವಿರುದ್ಧ ಸಿಡಿದೆದ್ದಿರುವ ಸಿದ್ದರಾಮಯ್ಯ ಹೇಗಾದ್ರೂ ಮಾಡಿ ಹೊಸಕೋಟೆಯನ್ನು ಕಾಂಗ್ರೆಸ್ ವಶ ಮಾಡಿಕೊಳ್ಳಲು ಹೊಸ ಅಭ್ಯರ್ಥಿಯನ್ನೆ ಹುಡುಕಿದ್ದಾರೆ ಎನ್ನಲಾಗುತ್ತಿದೆ.
ಯಾರು ‘ಕೈ’ ಅಭ್ಯರ್ಥಿ?
ಅನರ್ಹ ಶಾಸಕರ ಅರ್ಜಿ ಪ್ರಕರಣ ನ್ಯಾಯಾಲಯದಲ್ಲಿ ಇರೋದರಿಂದ ಒಂದು ವೇಳೆ ಅವಕಾಶ ಸಿಗದಿದ್ದರೆ ಪುತ್ರನನ್ನ ಕಣಕ್ಕಿಳಿಸಲು ಎಂಟಿಬಿ ನಾಗರಾಜ್ ಪ್ಲಾನ್ ಮಾಡಿಕೊಂಡಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಬಿಜೆಪಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದು ಕಣಕ್ಕಿಳಿಸುವ ಕುರಿತು ಚಿಂತಿಸಲಾಗಿದೆ. ಒಂದು ವೇಳೆ ಬಚ್ಚೇಗೌಡರರು ಒಪ್ಪದಿದ್ದಲ್ಲಿ ತಮ್ಮ ಆಪ್ತ ಶಿಷ್ಯ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಹೊಸಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಿದ್ದರಾಮಯ್ಯನವರು ಬೈರತಿ ಸುರೇಶ್ ಜೊತೆ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪತ್ನಿಗೆ ಟಿಕೆಟ್ ಬಹುತೇಕ ಖಚಿತವಾಗುತ್ತಿದ್ದಂತೆ ಬೈರತಿ ಸುರೇಶ್ ಹೊಸಕೋಟೆಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿ, ಸ್ಥಳೀಯಮಟ್ಟದಲ್ಲಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಹಿರಂಗವಾಗಿಯೇ ಸಿದ್ದರಾಮಯ್ಯರ ವಿರುದ್ಧ ತೊಡೆ ತೊಟ್ಟಿರುವ ಎಂಟಿಬಿ ನಾಗರಾಜವರನ್ನು ಸೋಲಿಸಲು ಮಾಜಿ ಸಿಎಂ ಶಪಥ ಮಾಡಿದ್ದಾರಂತೆ. ಇತ್ತ ಕಾಂಗ್ರೆಸ್ ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಹ ಎಂಟಿಬಿ ವಿರುದ್ಧ ಗುಡುಗಿದ್ದಾರೆ. ಹಾಗಾಗಿ ಎಂಟಿಬಿ ನಾಗರಾಜ್ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಯಾಗುವ ಸಾಧ್ಯತೆಗಳಿವೆ.