ಹರ್ಯಾಣ ಬಿಜೆಪಿ ಸಿಎಂ ಹೇಳಿಕೆ ಉಲ್ಲೇಖಿಸಿ ವಿಶ್ವಸಂಸ್ಥೆಗೆ ದೂರು ಕೊಟ್ಟ ಪಾಕ್

Public TV
2 Min Read
CM Manohar Lal Khattar

ನವದೆಹಲಿ: ಕಾಶ್ಮೀರ ಕನ್ಯೆಯರ ಬಗ್ಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಹಾಗೂ ಉತ್ತರ ಪ್ರದೇಶ ಬಿಜೆಪಿ ಶಾಸಕ ವಿಕ್ರಂ ಸೈನಿ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನ ವಿರೋಧಿಸಿದ್ದು, ಈ ಸಂಬಂಧ ವಿಶ್ವಸಂಸ್ಥೆಗೆ ದೂರು ನೀಡಿದೆ.

ಭಾರತ ಸರ್ಕಾರ ಜಮ್ಮು-ಕಾಶ್ಮೀರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಪಾಕಿಸ್ತಾನ ಸಿಡಿದೆದ್ದಿದೆ. ಅಲ್ಲದೆ ವಿಶೇಷ ಸ್ಥಾನಮಾನವನ್ನು ಕಸಿದುಕೊಂಡು ಕಾಶ್ಮೀರಿಯರ ಮಾನವ ಹಕ್ಕಿಗೆ ಧಕ್ಕೆ ತಂದಿದೆ ಎಂದು ಪಾಕ್ ಆರೋಪಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದು ಭಾರತದ ಆಂತರಿಕ ವಿಚಾರ ಎಂದು ಟ್ವೀಟ್ ಮಾಡಿ ವಿರೋಧಿಸಿದ್ದರು. ಜೊತೆಗೆ ಬಿಜೆಪಿ ನಾಯಕರು ಕಾಶ್ಮೀರಿ ಕನ್ಯೆಯರ ಕುರಿತು ಹೇಳಿಕೆ ನೀಡಿದ್ದರು. ಇದನ್ನೆಲ್ಲಾ ಉಲ್ಲೇಖಿಸಿ ಪಾಕಿಸ್ತಾನದ ಮಾನವ ಹಕ್ಕು ಸಚಿವೆ ಶೆರೀನ್ ಮಜಾರಿ ವಿಶ್ವಸಂಸ್ಥೆಗೆ ದೂರಿನ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನೂ ಕೂಡ ಉಲ್ಲೇಖಿಸಲಾಗಿದೆ. ಲಿಂಗತಾರತಮ್ಯದ ಹಿಂಸಾಚಾರದ ಅಡಿಯಲ್ಲಿ ಬಿಜೆಪಿ ನಾಯಕ ವಿಕ್ರಮ್ ಸೈನಿ ಅವರು ಹೇಳಿದ್ದ ಮಾತುಗಳನ್ನು ಪಾಕಿಸ್ತಾನ ಪತ್ರದಲ್ಲಿ ಉಲ್ಲೇಖಿಸಿದೆ. ಭಾರತೀಯ ಮುಸ್ಲಿಮರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಬೇಕು, ಯಾಕೆಂದರೆ ಇನ್ನು ಮುಂದೆ ಅವರು ಬಿಳಿ ಮೈ ಬಣ್ಣದ ಕಾಶ್ಮೀರಿ ಕನ್ಯೆಯರನ್ನು ಮದುವೆಯಾಗಬಹುದು ಎಂದು ಬಹಿರಂಗ ಭಾಷಣದಲ್ಲಿ ಹೇಳಿಕೆ ಕೊಟ್ಟಿದ್ದರು.

ಈ ಹೇಳಿಕೆ ಬೆನ್ನಲ್ಲೇ ‘ಬೇಟಿ ಬಚಾವೋ ಬೇಟಿ ಪಡಾವೊ’ ಕಾರ್ಯಕ್ರಮದಲ್ಲಿ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಕಾಶ್ಮೀರಿ ಕನ್ಯೆಯರ ಕುರಿತು ಹೇಳಿಕೆ ಕೊಟ್ಟಿದ್ದರು. 370ನೇ ವಿಧಿ ರದ್ದತಿಯ ನಂತರ ಕಾಶ್ಮೀರ ಮುಕ್ತ ಪ್ರದೇಶವಾಗಿದೆ. ಅಲ್ಲಿಂದ ಸೊಸೆಯಂದಿರನ್ನು ತರಬಹುದು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು ಎಂದು ಹೇಳಿದ್ದರು.

ಈ ರೀತಿ ಹೇಳಿಕೆಗಳು ಅವರ ಮನಸ್ಥಿತಿ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಬಿಎಸ್‍ಪಿ ವರಿಷ್ಠೆ ಮಾಯಾವತಿ ಕಿಡಿಕಾರಿದ್ದರು. ಬಳಿಕ ರಾಹುಲ್ ಗಾಂಧಿ ಕೂಡ ಕಾಶ್ಮೀರಿ ಮಹಿಳೆಯರ ಬಗ್ಗೆ ಖಟ್ಟರ್ ಹೇಳಿಕೆ ಕೀಳು ಮನಸ್ಥಿತಿಯದ್ದು ಎಂದು ಹರಿಹಾಯ್ದಿದ್ದರು.

Capture 6 1

ಈ ವಿರೋಧಗಳಿಂದ ಎಚ್ಚೆತ್ತುಕೊಂಡ ಖಟ್ಟರ್ ಅವರು, ಮಾಧ್ಯಮಗಳು ತಮ್ಮ ಹೇಳಿಕೆಯನ್ನು ತಿರುಚಿವೆ, ನಾನು ಹೆಣ್ಣು ಮಕ್ಕಳ ಬಗ್ಗೆ ಅತಿ ಹೆಚ್ಚಿನ ಗೌರವ ಹೊಂದಿದ್ದೇನೆ ಎಂದು ಆರೋಪವನ್ನು ತಳ್ಳಿಹಾಕಿದ್ದರು. ತನ್ನ ಹೇಳಿಕೆಯನ್ನು ಬಳಸಿ ಪಾಕಿಸ್ತಾನ ಲಾಭ ಪಡೆಯಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡು ರಾಹುಲ್ ಗಾಂಧಿ ಅವರು ಸಹ ಕಾಶ್ಮೀರ ದೇಶದ ಆಂತರಿಕ ವಿಷಯ. ಕಾಶ್ಮೀರದಲ್ಲಿನ ಪರಿಸ್ಥಿತಿಗೆ ನೆರೆಯ ಪಾಕಿಸ್ತಾನವೇ ಕಾರಣ ಎಂದು ಆರೋಪಿಸಿದ್ದರು.

ಮೊದಲೇ ಭಾರತದ ವಿರುದ್ಧ ಕತ್ತಿ ಮಸಿಯುತ್ತಿದ್ದ ಪಾಕಿಸ್ತಾನ ಭಾರತೀಯ ರಾಜಕೀಯ ನಾಯಕರ ಹೇಳಿಕೆಯಿಂದ ಮತ್ತಷ್ಟು ರೊಚ್ಚಿಗೆದ್ದಿದೆ. ಭಾರತೀಯ ನಾಯಕರ ಹೇಳಿಕೆ ಕಾಶ್ಮೀರಿಯರ ಹಕ್ಕುಗಳಿಗೆ ಧಕ್ಕೆ ತಂದಿದೆ, ಇದು ಅಪರಾಧ ಎಂದು ಪಾಕಿಸ್ತಾನ ವಿಶ್ವಸಂಸ್ಥೆಗೆ ಈ ಸಂಬಂಧ ದೂರ ಪತ್ರ ಸಲ್ಲಿಸಿದೆ.

Share This Article
Leave a Comment

Leave a Reply

Your email address will not be published. Required fields are marked *