88 ವರ್ಷದ ಡ್ರಗ್ ಡೀಲರ್ ವೃದ್ಧೆ ಅರೆಸ್ಟ್

Public TV
1 Min Read
drug dealer

ನವದೆಹಲಿ: ಮಾದಕವಸ್ತು ದಂಧೆ ನಡೆಸುತ್ತಿದ್ದ ವೃದ್ಧೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು 88 ವರ್ಷದ ರಾಜ್ರಾಣಿ ಎಂದು ಗುರುತಿಸಲಾಗಿದ್ದು, ಈಕೆ ದಶಕಗಳಿಂದ ಮಾದಕವಸ್ತುಗಳ ವ್ಯಾಪಾರ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಈ ಮಾದಕವಸ್ತುಗಳ ದಂಧೆಯನ್ನು ಮೊದಲು ರಾಜ್ರಾಣಿ ಗಂಡ ನೋಡಿಕೊಳ್ಳತ್ತಿದ್ದ. ಆದರೆ 1990 ರಲ್ಲಿ ಆತ ಮೃತಪಟ್ಟ ನಂತರ ರಾಜ್ರಾಣಿ ಈ ದಂಧೆ ಮಾಡುವ ಅಧಿಕಾರವನ್ನು ವಹಿಸಿಕೊಂಡಿದ್ದಾಳೆ. ರಾಜ್ರಾಣಿಯನ್ನು 1996 ರಿಂದ ಇಲ್ಲಿಯವರಿಗೂ ದೆಹಲಿ ಪೊಲೀಸರು 6 ಬಾರಿ ಬಂಧಿಸಿದ್ದು ಜಾಮೀನು ಪಡೆದು ಬಿಡುಗಡೆಯಾಗುತ್ತಿದ್ದಳು.

iStock 000060887286 Medium

ರಾಜ್ರಾಣಿಗೆ ಈಗ ವಯಸ್ಸಾದ ಕಾರಣ ಆಕೆಯ ಆರೋಗ್ಯ ಸರಿಯಿಲ್ಲ. ಆಕೆಗೆ ನಡೆಯಲು ಆಗುವುದಿಲ್ಲ. ಆದರೆ ಅವಳ ಸಹಚರರ ಸಹಾಯದಿಂದ ಈಗಲೂ ದಂಧೆ ನಡೆಸುತ್ತಿದ್ದಾಳೆ. ಬುಧವಾರ ಆಕೆ 16 ಗ್ರಾಮ್ ಹೆರಾಯಿನ್ ಅಕ್ರಮವಾಗಿ ಸಾಗಿಸುತ್ತಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು, ಪಶ್ಚಿಮ ದೆಹಲಿಯಲ್ಲಿರುವ ಆಕೆಯ ಮನೆಯ ಮೇಲೆ ದಾಳಿ ಮಾಡಿ ಆಕೆಯನ್ನು ಬಂಧಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಡಿಸಿಪಿ ಮೋನಿಕಾ ಭಾರದ್ವಾಜ್, ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ ರಾಜ್ರಾಣಿಯನ್ನು ಬಂಧಿಸಿದ್ದಾರೆ. ಈ ವೇಳೆ ಅವಳ ಬಳಿ ಹೆರಾಯಿನ್ ಕಂಡುಬಂದಿದೆ. ಆಕೆ ಪಂಜಾಬ್ ಮತ್ತು ಉತ್ತರ ಪ್ರದೇಶದ ಮಾದಕವಸ್ತು ವ್ಯಾಪಾರಿಗಳೊಂದಿಗೆ ಸಂಪರ್ಕದಲ್ಲಿದ್ದಳು. ಜೈಲಿಗೆ ಹೋಗಲು ಭಯ ಪಡದ ಮಹಿಳೆ, ಕಾನೂನುಗಳ ಬಗ್ಗೆ ಚೆನ್ನಾಗಿ ತಿಳಿದಿಕೊಂಡಿದ್ದಾಳೆ ಮತ್ತು ನಾವು ಬಂಧಿಸಿದ ಪ್ರತಿ ಬಾರಿಯೂ ಜಾಮೀನು ಪಡೆದು ಹೊರಬರುತ್ತಾಳೆ ಎಂದು ಹೇಳಿದ್ದಾರೆ.

delhi police 1

ವಿಚಾರಣೆ ವೇಳೆ ರಾಜ್ರಾಣಿ ತಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದೆ ಮತ್ತು ಪತಿಯೊಂದಿಗೆ ಏಳು ಮಕ್ಕಳು ಇದ್ದರು ಎಂದು ಹೇಳಿದ್ದಾಳೆ. ಆದರೆ ಪತಿ ಮಾದಕವಸ್ತು ವ್ಯಾಪಾರಿಯಾಗಿದ್ದ ಕಾರಣದಿಂದ ನನ್ನ ಆರು ಮಕ್ಕಳು ಮಾದಕ ದ್ರವ್ಯ ಸೇವನೆಯಿಂದ ಮತ್ತು ಕೆಲವರು ಅಪಘಾತದಿಂದ ಮೃತಪಟ್ಟಿದ್ದಾರೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.

ಈಗ ಮತ್ತೆ ಆಕೆಯನ್ನು ಅರೆಸ್ಟ್ ಮಾಡಿರುವ ಪೊಲೀಸರು ರಾಜ್ರಾಣಿ ವಿರುದ್ಧ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆ ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *