ದೇವಿ ಕಣ್ಬಿಟ್ಟಿದ್ದಾಳೆಂದು ಹಬ್ಬಿತು ಸುದ್ದಿ – ಜನ ಸೇರ್ತಿದ್ದಾಗೆ ಬಯಲಾಯ್ತು ಅಸಲಿಯತ್ತು

Public TV
2 Min Read
hbl devara kannu collage copy

ಹುಬ್ಬಳ್ಳಿ: ಜಿಲ್ಲೆಯ ಮಂಟೂರು ರಸ್ತೆ ವಲ್ಲಭಬಾಯಿ ನಗರದ ಶ್ರೀರಾಮ ಮಂದಿರದಲ್ಲಿ ಮಂಗಳವಾರ ಸಂಜೆ ನಲ್ಲಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಕೇಳಿ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬಂದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಆದರೆ ಸಮಯ ಕಳೆದಂತೆ ದೇವಿಯ ಕಣ್ಣಿನ ಅಸಲಿಯತ್ತನ್ನ ಕಂಡ ಜನ ಶಾಕ್ ಆಗಿದ್ದಾರೆ.

ಕೆಲವು ಯುವಕರು ದೇವಸ್ಥಾನದ ಪಕ್ಕದ ಮೈದಾನದಲ್ಲಿ ಫುಟ್‍ಬಾಲ್ ಆಡುತ್ತಿದ್ದರು. ಸಂಜೆ 4 ಗಂಟೆ ಸುಮಾರು ಯುವಕನೊಬ್ಬ ದೇವಸ್ಥಾನದ ಬಳಿ ಬಂದಿದ್ದ. ನಲ್ಲಮ್ಮ ದೇವಿ ಗುಡಿಯ ಬಾಗಿಲು ತೆರೆದಿತ್ತು. ಬಾಗಿಲು ಮುಚ್ಚಲೆಂದು ಹೋದಾಗ ದೇವಿ ಕಣ್ಣು ತೆರೆದಿರುವುದನ್ನು ನೋಡಿ ಅಚ್ಚರಿಯಾಗಿ ಕೂಡಲೇ ಜನರನ್ನು ಸೇರಿಸಲಾಗಿತ್ತು. 30 ವರ್ಷದಿಂದ ಇರುವ ಈ ನಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆದ ಪವಾಡ ನೋಡಲು ಜನಸಾಗರವೇ ಹರಿದುಬಂದಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪಬ್ಲಿಕ್ ಟಿವಿ ತಂಡಕ್ಕೂ ಅನುಮಾನ ಹುಟ್ಟಿತ್ತು.

hbl devara kannu 4 copy

ದೇವಿಗೆ ಬಂದಿರುವ ಕಣ್ಣು ಅಸಲಿಯೋ ನಕಲಿಯೋ ಎಂಬ ಚರ್ಚೆಯೂ ನಮ್ಮ ಮನದಲ್ಲೇ ಶುರುವಾಗಿತ್ತು. ಪರೀಕ್ಷಿಸಲು ಮುಂದಾದ್ರೂ ನೂಕುನುಗ್ಗಲು ಉಂಟಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ದೇವಿ ಕಣ್ಣು ಬಿಟ್ಟಿರುವುದನ್ನು ನೋಡಲು ಜನ ಬರುತ್ತಲೇ ಇದ್ದುದರಿಂದ ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.

ಕಣ್ಣು ಮೂಡಿದ್ದ ದೇವರ ಫೋಟೋ ಪರೀಕ್ಷಿಸಿ ನೋಡಿದಾಗ ಅದು ಬಾಹ್ಯವಾಗಿ ಅಂಟಿಸಿದ್ದು ಎಂಬ ಅನುಮಾನ ಬಂದಿತ್ತು. ಬಳಿಕ ಶ್ರೀರಾಮ ದೇವಸ್ಥಾನದ ಟ್ರಸ್ಟಿಗಳು ಪೊಲೀಸರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಯಿತು. ನಲ್ಲಮ್ಮ ದೇವಿಯ ಮೂರ್ತಿಯನ್ನು ದೊಡ್ಡ ಹರಿವಾಣದಲ್ಲಿಟ್ಟು ನೀರಿನಿಂದ ಸ್ಚಚ್ಛವಾಗಿ ತೊಳೆದಾಗ ಅಸಲಿಯತ್ತು ಬಯಲಾಯಿತು.

hbl devara kannu 5

ಬಾಗಿಲಿಗೆ ಬೀಗ ಇಲ್ಲದ ಚಿಕ್ಕ ಗುಡಿ ಪ್ರವೇಶಿಸಿದ್ದ ಖದೀಮರು ಹುಣಸೇ ಹಣ್ಣು ಬಳಸಿ ಮೂರ್ತಿಗೆ ಪ್ಲಾಸ್ಟಿಕ್ ಕಣ್ಣನ್ನು ಅಂಟಿಸಿ, ಅರಿಶಿಣ-ಕುಂಕುಮ ಹಾಕಿದ್ದರು. ತುಸು ದೂರದಿಂದ ನೋಡಿದರೆ, ಅಸಲಿ ಕಣ್ಣು ಮೂಡಿರುವಂತೆಯೇ ಭಾಸವಾಗುತ್ತಿತ್ತು. ಇದನ್ನೇ ಪವಾಡ ಎಂದು ನಂಬಿದ ಕೆಲವರು ಗುಲ್ಲೆಬ್ಬಿಸಿದ್ದರಿಂದ ನೂರಾರು ಜನ ಜಮಾಯಿಸಿದ್ದರು. ಪವಾಡ ಬಯಲಾಗುತ್ತಿದ್ದಂತೆಯೇ ಅಲ್ಲಿದ್ದ ಜನರೆಲ್ಲ ಅಪರಿಚಿತ ಖದೀಮನನ್ನು ಶಪಿಸುತ್ತ ವಾಪಸ್ಸಾದರು.

ಶ್ರೀರಾಮ ದೇವಸ್ಥಾನದ ಆವರಣದಲ್ಲಿ ನಲ್ಲಮ್ಮದೇವಿ ಗುಡಿ ಇದೆ. ಇದು ರೈಲ್ವೆ ಇಲಾಖೆಯ ಜಾಗೆಯೂ ಹೌದು. ತನ್ನದೇ ಜಾಗ ಆದ್ದರಿಂದ ರೈಲ್ವೆ ಇಲಾಖೆ ಇತ್ತೀಚೆಗೆ ದೇವಸ್ಥಾನ ತೆರವು ಮಾಡಲು ಮುಂದಾಗಿತ್ತು. ಅದನ್ನು ತಪ್ಪಿಸಲೆಂದು ಕೆಲವರು ಈ ರೀತಿ ನಾಟಕ ಮಾಡಿ ಜನರ ಭಾವನೆ ಕೆರಳಿಸಲು ಪ್ರಯತ್ನ ನಡೆಸಿದ್ದರು ಎಂಬ ಮಾತು ಕೇಳಿಬಂದಿದೆ. ತನಿಖೆಯ ನಂತರವಷ್ಟೇ ಇದರ ಹಿಂದೆ ಯಾರ ಕೈವಾಡವಿದೆ ಅಂತ ತಿಳಿಯಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *