ನವದೆಹಲಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಯಿ ಹಣ ನೀಡದ್ದಕ್ಕೆ ಸಿಟ್ಟಾಗಿ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೆಹಲಿಯ ಅಮಾನ್ ವಿಹಾರ್ ಪ್ರದೇಶದ ಶನಿವಾರದಂದು ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ನೇಣಿಗೆ ಶರಣಾಗಿದ್ದಾನೆ. ಕೃಷ್ಣ ಜನ್ಮಾಷ್ಟಮಿ ದಿನ ಬಾಲಕ ತಾಯಿ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಬಾಲಕ ಕೋಪಗೊಂಡಿದ್ದನು. ನಂತರ ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ತಾಯಿ ತೆರೆಳುತ್ತಿದ್ದ ವೇಳೆ ಮಗ ಸಿಟ್ಟಿನಿಂದ ಬರುವುದಿಲ್ಲ ಎಂದು ಮನೆಯಲ್ಲೇ ಉಳಿದಿದ್ದನು.
ಸಿಟ್ಟು ಕಡಿಮೆಯಾದ ಮೇಲೆ ಸರಿಯಾಗುತ್ತಾನೆ ಎಂದು ತಾಯಿ ಅವನನ್ನು ಮನೆಯಲ್ಲಿಯೇ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಮೊದಲೇ ಸಿಟ್ಟಿನಲ್ಲಿದ್ದ ಬಾಲಕನಿಗೆ ಏನು ಆಲೋಚನೆ ಬಂತೋ ಗೊತ್ತಿಲ್ಲ. ಯಾರು ಇಲ್ಲದ ಸಂದರ್ಭದಲ್ಲಿ ಆತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವರ ದರ್ಶನ ಮುಗಿಸಿ ಮನೆಗೆ ಬಂದ ತಾಯಿ ಮಗನ ಮೃತದೇಹ ನೋಡಿ ಕಂಗಾಲಾಗಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.