ಜಮ್ಮು ಕಾಶ್ಮೀರ ಚೇತರಿಸಿಕೊಳ್ಳಲು ಸಮಯ ಬೇಡವೇ – ರಾಹುಲ್ ವಿರುದ್ಧ ಮಾಯಾವತಿ ಗುಡುಗು

Public TV
2 Min Read
Mayawati

ನವದೆಹಲಿ: ಜಮ್ಮು ಕಾಶ್ಮೀರ ಈಗ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ರಾಜ್ಯಪಾಲರ ಅನುಮತಿ ಪಡೆಯದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಸರಿಯೇ? ಇದರಿಂದ ಅವರಿಗೆ ರಾಜಕೀಯ ಮಾಡಲು ಅವಕಾಶ ನೀಡಿದಂತಾಗುವುದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಇತರ ನಾಯಕರ ವಿರುದ್ಧ ಬಿಎಸ್‍ಪಿ ನಾಯಕಿ ಮಾಯಾವತಿ ಹರಿಹಾಯ್ದಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷಗಳ ನಾಯಕರ ಕ್ರಮವನ್ನು ಖಂಡಿಸಿರುವ ಅವರು, ಜಮ್ಮು ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ವಿರೋಧ ಪಕ್ಷಗಳ ಗುಂಪು ಯೋಚಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರದ ಪರವಾಗಿ ಮತ್ತೊಮ್ಮೆ ಬ್ಯಾಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇತರೆ ವಿರೋಧ ಪಕ್ಷಗಳ ನಾಯಕರು ಶನಿವಾರ ಜಮ್ಮು ಕಾಶ್ಮೀರದ ಸ್ಥಿತಿಗತಿ ಅರಿಯಲು ಶ್ರೀನಗರಕ್ಕೆ ತೆರಳಿದ್ದರು. ಇದಕ್ಕೆ ರಾಜಕೀಯ ವಲಯದಲ್ಲಿ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗುತ್ತಿವೆ. ಇದೀಗ ಮಾಯಾವತಿ ಅವರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ವಿರೋಧ ಪಕ್ಷದವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಈ ವಿಷಯದ ಬಗ್ಗೆ ರಾಜಕೀಯ ಮಾಡಲು ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅನುಮತಿ ಪಡೆಯದೇ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರಿಗೆ ರಾಜಕೀಯ ಮಾಡಲು ಅವಕಾಶ ಸಿಗಲಿಲ್ಲವೇ? ಅಲ್ಲಿಗೆ ಹೋಗುವ ಮುನ್ನ ಸ್ವಲ್ಪ ಯೋಚಿಸಿದ್ದರೆ ಸೂಕ್ತವಾಗಿತ್ತು ಎಂದು ಹರಿಹಾಯ್ದಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಮಾನತೆ, ಐಕ್ಯತೆ ಮತ್ತು ಸಮಗ್ರತೆಯ ಪ್ರತಿಪಾದಕರಾಗಿದ್ದರು. ಹೀಗಾಗಿಯೇ ನಾನು ಜಮ್ಮು ಕಾಶ್ಮೀರದ 370ನೇ ವಿಧಿಯ ಪರವಾಗಿದ್ದೇನೆ ಎಂದು ಬಿಎಸ್‍ಪಿ ನಾಯಕಿ ಮಾಯಾವತಿ ತಿಳಿಸಿದ್ದರು.

ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 69 ವರ್ಷಗಳ ನಂತರ 370ನೇ ವಿಧಿ ರದ್ದುಪಡಿಸಲಾಗಿದೆ. ಅಲ್ಲಿನ ಪರಿಸ್ಥಿತಿ ಸಾಮಾನ್ಯವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನ್ಯಾಯಾಲಯವೂ ಸಹ ಇದನ್ನು ಒಪ್ಪಿಕೊಂಡಿದೆ. ಹೀಗಾಗಿ ಸ್ವಲ್ಪ ಕಾಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ತಂಡ ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಅರಿಯಲು ಶನಿವಾರ ಶ್ರೀನಗರಕ್ಕೆ ತೆರಳಿತ್ತು. ಆಗ ಶ್ರೀನಗರ ವಿಮಾನನಿಲ್ದಾಣದಿಂದ ಹೊರಗೆ ಕಾಲಿಡಲು ಭದ್ರತಾ ಸಿಬ್ಬಂದಿ ಬಿಟ್ಟಿಲ್ಲ. ಹೀಗಾಗಿ ಒಂದು ಗಂಟೆಯೊಳಗೇ ವಿರೋಧ ಪಕ್ಷಗಳ ನಾಯಕರ ತಂಡ ದೆಹಲಿಗೆ ಮರಳಿತ್ತು.

mayawati rahul gandhi

370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಬಿಎಸ್‍ಪಿಯ ಮಾಯಾವತಿ, ಬಿಜು ಜನತಾದಳ, ಎಐಎಡಿಎಂಕೆ, ಜಗನ್ ಮೋಹನ್ ರೆಡ್ಡಿಯವರ ವೈಎಸ್‍ಆರ್ ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿ, ಸಂಸತ್‍ನಲ್ಲಿ ಬಹುಮತ ಸಾಬೀತಿಗೆ ನೆರವಾಗಿದ್ದವು. ಆದರೆ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಜಮ್ಮು ಕಾಶ್ಮೀರದಲ್ಲಿ ಭಾರೀ ನಿರ್ಬಂಧಗಳನ್ನು ಹೇರಲಾಗಿದೆ ಎಂದು ವಿರೋಧಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *